ಜನಮನ

ಕೊರ್ಗಿ, ನೂಜಿ, ಪಡುಮುಂಡು ಪರಿಸರಗಳಲ್ಲಿ ಚಿರತೆ, ಕಾಡುಕೋಣ ಹಾವಳಿ ಮುಕ್ತಿಗಾಗಿ ಮನವಿ 

Views: 39

ಕುಂದಾಪುರ ತಾಲೂಕಿನ ಕೊರ್ಗಿ, ನೂಜಿ, ಪಡುಮುಂಡು ಪರಿಸರದಲ್ಲಿ ಚಿರತೆ ಮತ್ತು ಕಾಡುಕೋಣಗಳ ಹಾವಳಿಗೆ ನಲುಗಿರುವ ಜನತೆ ಭಯದಿಂದ ಬದುಕು ಕಳೆಯುತ್ತಿದ್ದಾರೆ.ಈ ಪರಿಸರದಲ್ಲಿ ಸಾರ್ವಜನಿಕರು ಓಡಾಡಲು ಭಯಭಿತರಾಗಿದ್ದಾರೆ.

ಕಾಡಿನಿಂದ ನಾಡಿಗೆ ನುಗ್ಗುತ್ತಿರುವ ಚಿರತೆ  ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಚಿರತೆ ಬಾಯಿಗೆ ಆಹಾರವಾಗುತ್ತಿವೆ. ಕಾಡು ಪ್ರಾಣಿಗಳು ನಾಡಿಗೆ ನುಗ್ಗದಂತೆ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಅನುಷ್ಠಾನ ಆಗಿಲ್ಲ. ನಾಡಿಗೆ ನುಗ್ಗಿದ ಚಿರತೆ ಸಹಿತ ಇನ್ನಿತರ ವನ್ಯಜೀವಿಗಳನ್ನು ಮತ್ತೆ ಕಾಡಿಗೆ ಬಿಡುವ ಕೆಲಸ ಆಗಬೇಕಿದೆ. ಅವು ಮತ್ತೆ ನಾಡಿಗೆ ನುಗ್ಗುದಂತೆ ತಡೆಯಬೇಕಿದೆ

ಚಿರತೆ ಕಾಟ ನಾಗರಿಕರನ್ನು ತಲ್ಲಣಗೊಳಿಸಿದೆ. ನಾಯಿ, ಬೆಕ್ಕು, ಹಸುಗಳು ಅವುಗಳಿಗೆ ನಿರಂತರ ಆಹಾರವಾಗುತ್ತಿದೆ. ಕಾಡಂಚಿನ ಜನರು ಕತ್ತಲಾದ ಬಳಿಕ ರಸ್ತೆಯಲ್ಲಿ ಓಡಾಡಲು ಭಯಪಡುವ ಸ್ಥಿತಿ ಇದೆ. ಮಂಗ, ಕಾಡುಕೋಣ, ಕಡವೆ ಹಾವಳಿಯಿಂದ ನಲುಗಿರುವ ಜನತೆ ಚಿರತೆ ಭಯದಿಂದ ಬದುಕು ಕಳೆಯುತ್ತಿದ್ದಾರೆ.

ದಟ್ಟಾರಣ್ಯಕ್ಕೆ ಸೀಮಿತವಾಗಿದ್ದ ಕಾಡುಕೋಣಗಳು ಜನವಸತಿ ಇರುವ ಪ್ರದೇಶಗಳಿಗೂ ದಾಳಿ ಮಾಡುತ್ತಿವೆ.ಭತ್ತದ ಗದ್ದೆಗೆ ಕಾಡುಕೋಣ ಲಗ್ಗೆ ಇಟ್ಟಿದೆ.ಜನ ವಸತಿ ಪ್ರದೇಶವಾಗಿದ್ದರಿಂದ ಗಾಬರಿಗೊಂಡ ಕಾಡುಕೋಣ ಅಡ್ಡಾ ದಿಡ್ಡಿ ಓಡಾಡಿ ಕೃಷಿ ನಾಶ ಮಾಡಿದೆ.

ಕೇವಲ ಕಾಡುಕೋಣ ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಅನೇಕ ಕಾಡುಪ್ರಾಣಿಗಳು ಭತ್ತದ ಕೃಷಿಯ ಮೇಲೆ ದಾಳಿ ಮಾಡುತ್ತಿರುವುದು ಕೃಷಿಕರನ್ನು ಕಂಗೆಡಿಸಿದೆ.

ಜನರು ನಿರಂತರ ಓಡಾಡುವ ಪರಿಸರದಲ್ಲಿ ಇತ್ತೀಚಿಗೆ ಕಾಡುಕೋಣ, ಚಿರತೆ ಪ್ರತ್ಯಕ್ಷವಾಗುತ್ತಿದ್ದು ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಅರಣ್ಯಇಲಾಖೆಯವರು ಇಂತಹ ಪ್ರಾಣಿಗಳನ್ನು ಹಿಡಿದರೆ ಅದನ್ನು ದಟ್ಟ ಅಭಯಾರಣ್ಯಕ್ಕೆ ಬಿಡುವ ಬದಲು ಹತ್ತಿರದಲ್ಲೇ ಇರುವ ಕಾಡಿಗೆ ಬಿಡುತ್ತಾರೆ ಇದರಿಂದಾಗಿ ಅದು ಕಾಡಿಗೆ ಮರಳದೆ ವಾಪಸು ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಇನ್ನಾದರೂ ಅರಣ್ಯಇಲಾಖೆ ಎಚ್ಚೆತ್ತುಕೊಂಡು ಈ ಪರಿಸರದಲ್ಲಿ ಕಾಡುಕೋಣ, ಚಿರತೆ ಹಾವಳಿಯಿಂದ ಯಿಂದ ಮುಕ್ತಿ ನೀಡಬೇಕೆಂದು ಸ್ಥಳೀಯರು ಅರಣ್ಯಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

 

Related Articles

Back to top button