ಕುಂದಾಪುರ ಪ್ರಾಂಶುಪಾಲರಿಗೆ ಪ್ರಶಸ್ತಿ ತಡೆ: ಆದೇಶದ ವಿರುದ್ಧ ಸಿಡಿದೆದ್ದ ಬಿಜೆಪಿ

Views: 102
ಕುಂದಾಪುರ : ಎರಡು ವರ್ಷಗಳ ಹಿಂದೆ ನಡೆದಿದ್ದ ಹಿಜಬ್ ವಿವಾದದ ಪರಿಣಾಮ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದ್ದು, ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕುಂದಾಪುರ ಸರಕಾರಿ ಕಾಲೇಜಿನ ಪ್ರಾಂಶುಪಾಲರು ಗೇಟ್ ಬಳಿ ನಿಲ್ಲಿಸಿದ್ದರು. ಆ ಫೋಟೊ ವೈರಲ್ ಆಗಿತ್ತು. ಪ್ರಾಂಶುಪಾಲರ ಪ್ರಶಸ್ತಿ ಹಿಂಪಡೆಯುವಂತೆ ಕೆಲ ಪ್ರಗತಿಪರರು ಒತ್ತಡ ಹಾಕಿದ್ದರು. ಒತ್ತಡಕ್ಕೆ ಮಣಿದ ಸರ್ಕಾರ ಪ್ರಶಸ್ತಿಯನ್ನು ತಡೆಹಿಡಿದಿದೆ.ಇದರ ವಿರುದ್ಧ ಬಿಜೆಪಿ ಈಗ ಕೆಂಡಾಮಂಡಲವಾಗಿದೆ.
ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ರಾಮಕೃಷ್ಣ ಬಿಜಿ ಅವರಿಗೆ ಒಲಿದು ಬಂದ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ತಡೆ ಹಿಡಿದೆ. ಅದಕ್ಕೆ ಕಾರಣ ಸರ್ಕಾರದ ಆದೇಶ ಎನ್ನುತ್ತಿದ್ದಾರೆ ಇಲಾಖೆಯ ಅಧಿಕಾರಿಗಳು. ಈ ಹಿಂದೆ ನಡೆದ ಹಿಜಾಬ್ ವಿವಾದದಲ್ಲಿ ರಾಮಕೃಷ್ಣ ಬಿಜಿಯವರು ತಮ್ಮ ಕಾಲೇಜಿನಲ್ಲಿ ಹಿಜಾಬ್ ಹಾಕಿಕೊಂಡು ಬರದಂತೆ ವಿದ್ಯಾರ್ಥಿನಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಈ ಕಾರಣಕ್ಕಾಗಿಯೇ ಅವರಿಗೆ ಬಂದ ಪ್ರಶಸ್ತಿಯನ್ನು ತಡೆ ಹಿಡಿಯಲಾಗಿದೆ ಅನ್ನೋ ಮಾತುಗಳು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ.
ಬಿಜೆಪಿ ಅಧಿಕಾರದ ಅವಧಿಯಲ್ಲಿ ಆಗಿದ್ದ ಹಿಜಾಬ್ ಗಲಾಟೆ ವೇಳೆ, ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿಗಳನ್ನು ಕಾಲೇಜಿಗೆ ಪ್ರವೇಶಿಸಲು ಪ್ರಾಂಶುಪಾಲ ರಾಮಕೃಷ್ಠ ಒಪ್ಪಿಗೆ ನೀಡಿರಲಿಲ್ಲ. ಸಮವಸ್ತ್ರದ ಪಾಲನೆ ಕಡ್ಡಾಯಗೊಳಿಸಿದ್ದರು. ಇದೇ ಕಾರಣಕ್ಕೆ ಪ್ರಶಸ್ತಿ ನೀಡಿಲ್ಲ ಎಂಬ ವಾದಗಳು ಸದ್ಯ ಕೇಳಿ ಬರುತ್ತಿವೆ.
ಪ್ರಾಂಶುಪಾಲರ ಪ್ರಶಸ್ತಿಯನ್ನು ತಡೆ ಹಿಡಿದ ವಿಚಾರವಾಗಿ ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ,ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷರ ಅಗತ್ಯವಿದೆ. ಪ್ರಾಂಶುಪಾಲರ ಪ್ರಶಸ್ತಿ ವಾಪಸ್ ಪಡೆದದ್ದು ನೋವಿನ ಸಂಗತಿ. ಸರ್ಕಾರದ ನಡೆಯೇ ಆಶ್ಚರ್ಯಕ್ಕೆ ಎಡೆಮಾಡಿದೆ. ಸಮಾನ ವಸ್ತ್ರ ಇರಬೇಕು ಎಂದು ಹಿಜಾಬ್ ನಿಷೇಧಿಸಲಾಗಿತ್ತು. ಅಂದು ಪ್ರಾಂಶುಪಾಲರು ಸರ್ಕಾರದ ಆದೇಶವನ್ನು ಸರ್ಕಾರಿ ಅಧಿಕಾರಿಯಾಗಿ ಪಾಲಿಸಿದ್ದಾರೆ. ಹೈಕೋರ್ಟ್ ಕೂಡ ಅದಕ್ಕೆ ಪೂರಕವಾದ ಆದೇಶವನ್ನೇ ನೀಡಿತ್ತು. ಸಂವಿಧಾನದ ಆಶಯ ಅಂಬೇಡ್ಕರ್ ಅವರ ಆಶಯಕ್ಕೆ ಅನುಸಾರವಾಗಿ ಆದೇಶ ನೀಡಿತ್ತು ಸರಕಾರ ಹೈಕೋರ್ಟ್ ನ ಆದೇಶವನ್ನು ಗೌರವಿಸುತ್ತದೋ? ಅಥವಾ ತಮ್ಮ ಅಜೆಂಡವನ್ನು ಗೌರವಿಸುತ್ತದೋ ಸರ್ಕಾರ ಉತ್ತರಿಸಬೇಕು, ಇದು ಸರ್ಕಾರ ಶಿಕ್ಷಕವೃಂದಕ್ಕೆ ಮಾಡಿದ ಅವಮಾನ, ಸಿಎಂ ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಶಿಕ್ಷಕರಿಗೆ ಪ್ರಶಸ್ತಿಯನ್ನು ಪುನಃ ಘೋಷಣೆ ಮಾಡಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಿ ಪ್ರಶಸ್ತಿಗೆ ಅತ್ಯಂತ ಅರ್ಹರಾದ ಬಿ. ಜಿ. ರಾಮಕೃಷ್ಣ ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕು. ತಪ್ಪಿದಲ್ಲಿ ಜಿಲ್ಲೆಯ ಶಿಕ್ಷಕರಿಗೆ ನೈತಿಕ ಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.