ಕುಂದಾಪುರ:ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ, ಬೈಕ್ ಸವಾರ ಗಣೇಶ್ ಪ್ರಭು ಚಿಕಿತ್ಸೆಗೆ ಸ್ಪಂಧಿಸದೆ ಸಾವು
Views: 198
ಕನ್ನಡ ಕರಾವಳಿ ಸುದ್ದಿ: ಕುಂದಾಪುರದಲ್ಲಿ ನಡೆದ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಕುಂದಾಪುರದ ಕೆ. ಗಣೇಶ್ ಪ್ರಭು ಎಂದು ಗುರುತಿಸಲಾಗಿದೆ. ಅ. 25ರ ಮಧ್ಯರಾತ್ರಿ ಸುಮಾರು 12 ಗಂಟೆಗೆ ಕುಂದಾಪುರದ ಮೈಲಾರೇಶ್ವರ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದೆ.
ಗಣೇಶ್ ಪ್ರಭು ಅವರು ಮೋಟಾರ್ ಸೈಕಲ್‌ನಲ್ಲಿ ಸಂಗಮ್ ಕಡೆಯಿಂದ ರಸ್ತೆಯ ಎಡಬದಿಯಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಫನ್ನೀರ್ ಜ್ಯುವೆಲ್ಲರ್ಸ್ ಕಡೆಯಿಂದ ಸಂಗಮ್ ಕಡೆಗೆ ಬೈಕ್‌ನಲ್ಲಿ ಸಹ ಸವಾರ ಸುಜನ್‌ನನ್ನು ಕೂರಿಸಿಕೊಂಡು ಬರುತ್ತಿದ್ದ ಅಕ್ಷಿತ್, ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗದಲ್ಲಿ ಬೈಕ್ ಚಲಾಯಿಸಿಕೊಂಡು ಬಂದು ಗಣೇಶ್ ಪ್ರಭು ಅವರ ಬೈಕ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಡಿಕ್ಕಿಯ ರಭಸಕ್ಕೆ ಗಣೇಶ್ ಪ್ರಭು ಅವರ ತಲೆಗೆ ತೀವ್ರ ರಕ್ತಗಾಯವಾಗಿದ್ದು, ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಗಾಯಾಳುವಿಗೆ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಮೆದುಳು ಪ್ರತಿಕ್ರಿಯಿಸದೆ ಗಂಭೀರ ಸ್ಥಿತಿಯಲ್ಲಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಬೈಕ್ ಸವಾರ ಅಕ್ಷಿತ್ ಮುಖದ ಭಾಗಕ್ಕೆ ರಕ್ತಗಾಯವಾಗಿದ್ದು, ಸಹಸವಾರ ಸುಜನ್ ಸಣ್ಣಪುಟ್ಟ ಗಾಯಗೊಂಡಿದ್ದರು. ಸುಜನ್ ಕುಂದಾಪುರದ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದು, ಅಕ್ಷಿತ್ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






