ಇತರೆ

ಕಾರು ಬಾವಿಗೆ ಬಿದ್ದು 6 ಮಕ್ಕಳು ಸೇರಿ ಒಂದೇ ಕುಟುಂಬದ 9 ಜನರು ಸಾವು

Views: 93

ಕನ್ನಡ ಕರಾವಳಿ ಸುದ್ದಿ: ಕಾರು ಬಾವಿಗೆ ಬಿದ್ದು ಆರು ಜನ ಮಕ್ಕಳು ಸೇರಿ ಒಂದೇ ಕುಟುಂಬದ ಒಂಬತ್ತು ಜನರು ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಸಿಕ್‌ನ ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದೆ.

ಅಪಘಾತಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಶುಕ್ರವಾರ ತಡರಾತ್ರಿ ಕಾರ್ಯಕ್ರಮ ಮುಗಿಸಿ ಬರುವಾಗ ಎರ್ಟಿಗಾ ಕಾರು ಬಾವಿಗೆ ಬಿದ್ದು ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ನಾಸಿಕ್ ಜಿಲ್ಲೆಯ ದಿಂಡೋರಿ ತಾಲೂಕಿನ ಶಿವಾಜಿನಗರ ಪ್ರದೇಶದ ರಾಜ್ ಬ್ಯಾಂಕ್ವೆಟ್ ಹಾಲ್ನಲ್ಲಿ ಶುಕ್ರವಾರ ಸಂಜೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕೂಡ ಭಾಗಿಯಾಗಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಕಾರ್ಯಕ್ರಮ ಮುಗಿದ ನಂತರ, ದಿಂಡೋರಿಯ ದರ್ಗೋಡ್ ಕುಟುಂಬವು ಎರ್ಟಿಗಾ ಕಾರಿನಲ್ಲಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಭೀಕರ ದುರಂತದಲ್ಲಿ ಒಂದೇ ಕುಟುಂಬದ 9 ಜನ ಸಾವನ್ನಪ್ಪಿದ್ದಾರೆ. ರಾಖಿ ಸುನಿಲ್ ದರ್ಗೋಡ್, ಆಶಾ ಅನಿಲ್ ದರ್ಗೋಡ್, ಸೃಷ್ಟಿ ಅನಿಲ್ ದರ್ಗೋಡ್, ಸುನಿಲ್ ದರ್ಗೋಡ್, ಶ್ರೇಯಶ್ ದರ್ಗೋಡ್, ಮಾಧುರಿ ದರ್ಗೋಡ್, ಸಮೃದ್ಧಿ ದರ್ಗೋಡ್, ರೇಷ್ಮಾ ದರ್ಗೋಡ್ ಮತ್ತು ಶ್ರಾವಣಿ ದರ್ಗೋಡ್ ಸೇರಿದ್ದಾರೆ.

ನೀರು ತುಂಬಿದ ಬಾವಿಯಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿ: ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು. ಆದರೆ, ಬಾವಿಯಲ್ಲಿ ನೀರು ತುಂಬಿದ್ದರಿಂದ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಯಿತು. ಅಂತಿಮವಾಗಿ, ತಡರಾತ್ರಿ, ಕ್ರೇನ್ ಸಹಾಯದಿಂದ ಕಾರನ್ನು ಬಾವಿಯಿಂದ ಹೊರತೆಗೆಯಲಾಗಿದೆ.

ದಿಂಡೋರಿಯ ಶಿವಾಜಿನಗರ ಪ್ರದೇಶದಲ್ಲಿ ಖಾಸಗಿ ತರಬೇತಿ ಸಂಸ್ಥೆಯೊಂದು ಸ್ನೇಹ ಸಮ್ಮೇಳನ ಆಯೋಜಿಸಿತ್ತು. ಇಂದೋರ್ ಗ್ರಾಮದ ದರ್ಗೋಡ್ ಕುಟುಂಬವೂ ಸಹ ಭಾಗಿಯಾಗಿತ್ತು. ಕಾರ್ಯಕ್ರಮ ಮುಗಿದ ನಂತರ, ಅವರ ಕಾರು ಅಲ್ಲೇ ಹಾಲ್ ಪಕ್ಕದಲ್ಲಿದ್ದ ಬಾವಿಗೆ ಉರುಳಿದೆ. ಈ ಘಟನೆಯಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ. ನಿನ್ನೆ ತಡರಾತ್ರಿ ಕ್ರೇನ್ ಸಹಾಯದಿಂದ ಕಾರನ್ನು ಹೊರತೆಗೆದಿದ್ದೇವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದೇವೆ ಎಂದು ದಿಂಡೋರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಭಗವಾನ್ ಮಾಥುರೆ ಮಾಹಿತಿ ನೀಡಿದ್ದಾರೆ.

Related Articles

Back to top button
error: Content is protected !!