ರಾಜಕೀಯ

ವಿಧಾನ ಪರಿಷತ್‌: ಕೋಟ ಶ್ರೀನಿವಾಸ ಪೂಜಾರಿ ‘ಪಾಕಿಸ್ತಾನ ಜಿಂದಾಬಾದ್’‌ ಘೋಷಣೆ ವಿರುದ್ಧ ಹರಿಹಾಯ್ದ  ಗದ್ದಲ- ಸರ್ಕಾರ ವಜಾಕ್ಕೆ ಬಿಜೆಪಿ ಒತ್ತಾಯ

Views: 50

ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಕೂಗಿದ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಾಯಕರ ವಿರುದ್ಧ ವಿಪಕ್ಷಗಳು ಕಿಡಿಕಾರಿ ಸದನದಲ್ಲಿ ಗದ್ದಲ ಸೃಷ್ಟಿಸಿವೆ.

ಮೊದಲು ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ‘ಪಾಕಿಸ್ತಾನ ಜಿಂದಾಬಾದ್’‌ ಘೋಷಣೆ ವಿಷಯ ಪ್ರಸ್ತಾಪಿಸಿದರು. ಕಾಂಗ್ರೆಸ್‌ ವಿರುದ್ಧ ಹರಿಹಾಯ್ದ ಪೂಜಾರಿ, ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಕೋಟಾ ಮಾತಿಗೆ ಕಾಂಗ್ರೆಸ್‌ ನಾಯಕರು ವಿರೋಧ ವ್ಯಕ್ತಪಡಿಸಿದರು. ಈ ವಿಚಾರವಾಗಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಮತ್ತೆ ತಿರುಗೇಟು ಕೊಟ್ಟ ಕೋಟಾ, ಇವತ್ತು ಪಾಕಿಸ್ತಾನ ಪರ ಘೋಷಣೆ ಕೂಗ್ತಾರೆ. ನಾಳೆ ವಿಧಾನಸೌಧಕ್ಕೆ ಬಾಂಬ್‌ ಹಾಕ್ತಾರೆ. ಅದನ್ನೂ ಸಮರ್ಥಿಸಿಕೊಳ್ಳುತ್ತೀರಾ ಎಂದು ‘ಕೈ’ ನಾಯಕರ ವಿರುದ್ಧ ಹರಿಹಾಯ್ದರು

ಹೆಚ್‌.ಕೆ.ಪಾಟೀಲ್‌ ಮಾತನಾಡಿ, ನಾನು ಎರಡು-ಮೂರು ಚಾನಲ್‌ ವರದಿ ನೋಡಿದ್ದೇನೆ. ವೀಡಿಯೋ ಪರಿಶೀಲನೆ ಮಾಡಿದ್ದೇನೆ. ನಾನು ಕೇಳಿದ ವೀಡಿಯೋದಲ್ಲಿ ಪಾಕಿಸ್ತಾನ ಘೋಷಣೆ ಕೂಗಿಲ್ಲ ಎಂದು ಸಮರ್ಥಿಸಿಕೊಂಡರು. ಈ ವೇಳೆ ಬಿಜೆಪಿ ಕೇಶವ್‌ ಪ್ರಸಾದ್‌ ಮಧ್ಯೆ ಪ್ರವೇಶಿಸಿ, ಸಚಿವರಿಗೆ ಕಿವುಡು ಇರಬೇಕು ಎಂದು ಟೀಕಿಸಿದರು. ಇದರಿಂದ ಬಿಜೆಪಿ-ಕಾಂಗ್ರೆಸ್‌ ಸದಸ್ಯರ ನಡುವೆ ಗಲಾಟೆ ನಡೆಯಿತು.

ಮತ್ತೆ ಹೆಚ್‌.ಕೆ.ಪಾಟೀಲ್‌ ಮಾತನಾಡಿ, ನನಗೆ ಆ ರೀತಿ ಏನು ಕೇಳಿಲ್ಲ. ಈಗಾಗಲೇ ಬಿಜೆಪಿ ದೂರು ಕೊಟ್ಟಿದೆ. ಕಾನೂನು ಪ್ರಕಾರ ತನಿಖೆ ಮಾಡ್ತೀವಿ ಎಂದರು. ಸಚಿವರ ಮಾತಿಗೆ ಪೂಜಾರಿ ಕಿಡಿಕಾರಿದರು. ನಾಚಿಕೆ ಆಗಬೇಕು ಸರ್ಕಾರಕ್ಕೆ. ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂದರೆ ನಾಚಿಕೆ ಆಗಬೇಕು. ಸಚಿವರ ಉತ್ತರಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಪೂಜಾರಿ ಮಾತನಾಡಿ, ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ? ಸಿಎಂ ಬಂದು ಇಲ್ಲಿ ಉತ್ತರ ಕೊಡಬೇಕು? ಇಡೀ ರಾಜ್ಯಕ್ಕೆ ಕೇಳಿದ ಘೋಷಣೆ ಸರ್ಕಾರಕ್ಕೆ ಕೇಳಿಲ್ವಾ? ಕಾಂಗ್ರೆಸ್‌ ಧೋರಣೆ ಪಾಕಿಸ್ತಾನ ಪರವೋ, ಯಾರ ಪರ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಹಾಗೂ ವಿಪಕ್ಷಗಳ ಗದ್ದಲದಿಂದಾಗಿ ಪರಿಷತ್‌ ಕಲಾಪವನ್ನು ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದಾಗ ‘ದೇಶದ್ರೋಹಿ ಕಾಂಗ್ರೆಸ್’‌ ಎಂದು ಬಿಜೆಪಿ ಸದಸ್ಯರು ಧಿಕ್ಕಾರ ಕೂಗಿ ಅಸಮಾಧಾನ ಹೊರಹಾಕಿದರು. ಭಾರತ್‌ ಮಾತಾ ಕೀ ಜೈ ಘೋಷಣೆ ಜೊತೆಗೆ, ಕಾಂಗ್ರೆಸ್‌ ಸರ್ಕಾರ ವಜಾ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

Back to top button