ಆರ್ಥಿಕ

ಲಾಕರ್‌ನಲ್ಲಿದ್ದ ಚಿನ್ನಾಭರಣ ಕಳವು: ಬ್ಯಾಂಕ್‌ನ ಉದ್ಯೋಗಿಗಳಿಬ್ಬರ ಸೆರೆ

Views: 138

ಕನ್ನಡ ಕರಾವಳಿ ಸುದ್ದಿ: ಬ್ಯಾಂಕಿನ ಸಹದ್ಯೋಗಿ ಮಹಿಳೆಯೊಂದಿಗೆ ಸೇರಿ ಕೊಂಡು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಇಬ್ಬರು ಬ್ಯಾಂಕ್ ನೌಕರರನ್ನು ಬಂಧಿಸಿ 16ಲಕ್ಷ ರೂಪಾಯಿ ಬೆಲೆಯ 170 ಗ್ರಾಂ ಚಿನ್ನಾಭರಣವನ್ನು ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಸವೇಶ್ವರ ನಗರದ ಬ್ಯಾಂಕ್‌ವೊಂದರಲ್ಲಿ ವ್ಯವಸ್ಥಾಪಕರಾಗಿರುವ ಬ್ಯಾಡರಹಳ್ಳಿಯ ನಿವಾಸಿ ಬ್ಯಾಂಕಿನ ಲಾಕರ್ ಪೆಸಿಲಿಟಿಯನ್ನು ಪಡೆದುಕೊಂಡಿದ್ದಾರೆ. ಆ ಲಾಕರ್‌ನಲ್ಲಿ ಚಿನ್ನಾಭರಣಗಳು, ಬ್ಯಾಂಕ್ ಚೆಕ್‌ಬುಕ್, ಡಿಗ್ರಿ, ಸೆರ್ಟಿಫಿಕೆಟ್,  ಅಂಕಪಟ್ಟಿಗಳು ಇತರ ದಾಖಲಾತಿ ಗಳನ್ನು ಇಟ್ಟಿದ್ದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಲಾಕರ್ ಪರಿಶೀಲಿಸಿದಾಗ ದಾಖಲಾತಿಗಳು ಮಾತ್ರ ಇದ್ದು, ಆಭರಣಗಳು ಇರಲಿಲ್ಲ. ಬ್ಯಾಂಕಿನಲ್ಲಿರುವ ಸಹದ್ಯೋಗಿಗಳ ಪೈಕಿ ಯಾರೋ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಕಮಲಾ ನಗರದ ಎನ್‌ಜಿಓಎಸ್ ಕಾಲೋನಿಯಲ್ಲಿರುವ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬ್ಯಾಂಕಿನ ಸಹೋದ್ಯೋಗಿ ಮಹಿಳೆಯೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವುದಾಗಿ ಹೇಳಿದ್ದಾರೆ. ಬ್ಯಾಂಕ್‌ನ ಉದ್ಯೋಗಿ ಮಹಿಳೆಯೊಂದಿಗೆ ಸೇರಿಕೊಂಡು ಬ್ಯಾಂಕ್‌ನಲ್ಲಿದ್ದ ಕೀಗಳನ್ನು ಬಳಸಿ, ಲಾಕರ್ ತೆಗೆದು ಆಭ ರಣಗಳನ್ನು ಕಳವು ಮಾಡಿ ಪುನಃ ಲಾಕರ್ ಅನ್ನು ಯಥಾಸ್ಥಿತಿಯಲ್ಲಿ ಲಾಕ್ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ. ಈ ಇಬ್ಬರು ಆಭರಣ ಕಳವು ಮಾಡಿದ ನಂತರ ಅಗ್ರಹಾರ ದಾಸರಹಳ್ಳಿಯಲ್ಲಿರುವ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದು, ಇವರ ಮಾಹಿತಿಯಂತೆ ಜ್ಯುವೆಲರಿ ಅಂಗಡಿಯಿಂದ 170 ಗ್ರಾಂ ಆಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಇನ್ಸ್‌ಪೆಕ್ಟ‌ರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

Related Articles

Back to top button