ಯಕ್ಷರಂಗದ ಮೋಹಕ ತಾರೆ ಸುಧೀರ್ ಉಪ್ಪೂರು ಪೆರ್ಡೂರು ಮೇಳದಿಂದ ಹಾಲಾಡಿ ಬಯಲಾಟ ಮೇಳದ ತಿರುಗಾಟಕ್ಕೆ

Views: 265
ಕನ್ನಡ ಕರಾವಳಿ ಸುದ್ದಿ: ಯಕ್ಷರಂಗದ ಮೋಹಕ ತಾರೆ ಸುಧೀರ್ ಉಪ್ಪೂರು ಪೆರ್ಡೂರು ಮೇಳದಿಂದ ಈ ವರ್ಷ ಹಾಲಾಡಿ ಬಯಲಾಟ ಮೇಳದಲ್ಲಿ ಸ್ತ್ರೀ ವೇಷದಾರಿಯಾಗಿ ತಿರುಗಾಟ ಮಾಡಲಿದ್ದಾರೆ.
ಸುಧೀರ್ ಉಪ್ಪೂರು ಅವರು ಪ್ರಥಮವಾಗಿ ಕಲಿತದ್ದು ಯಕ್ಷಗಾನ ಕ್ಯಾಸೆಟ್ ನೋಡಿ ಅಂತೆ. ಸುಧೀರ್ ಉಪ್ಪೂರು ಅವರ ಮಾವ ಆನಂದ್ ಉಪ್ಪಿನಕುದ್ರು ಅವರು ಪ್ರಸಿದ್ಧ ಸ್ತ್ರೀ ವೇಷಧಾರಿ, ಸೌಕೂರು ಮೇಳದಲ್ಲಿ ಪ್ರಧಾನ ಸ್ತ್ರೀ ವೇಷಧಾರಿ. ಅವರ ವೇಷಗಳನ್ನು ನೋಡಿದ ಇವರು ಮುಂದೆ ಇವರ ಹಾಗೆಯೇ ವೇಷ ಮಾಡಬೇಕು ಎಂಬ ಆಸೆ ಇತ್ತು, ಇದುವೇ ಇವರಿಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ ಆಯಿತು.
ಸುಧೀರ್ ಉಪ್ಯೂರು ಅವರು ತಮ್ಮ ಪ್ರಾಥಮಿಕ ಯಕ್ಷಗಾನ ನಾಟ್ಯವನ್ನು ವಿನಾಯಕ ಯಕ್ಷಗಾನ ಸಂಘ ಕೆ.ಜಿ ರೋಡ್ ಉಪ್ಪೂರು ಮತ್ತು ನಾಗಲಿಂಗೇಶ್ವರ ಯಕ್ಷಗಾನ ಸಂಘ ಅಗ್ರಹಾರ ಹೇರೂರು ಸಂಘಗಳಲ್ಲಿ ವೇಷಗಳನ್ನು ಮಾಡಿರುತ್ತಾರೆ. ದಿವಂಗತ ರಾಘವೇಂದ್ರ ನಾಯಕ್ ಕರಂಬಳ್ಳಿ ಇವರ ಯಕ್ಷಗಾನದ ಗುರುಗಳು ಅವರ ಹಲವು ಪ್ರಸಂಗದ ವೇಷಗಳನ್ನು ಮಾಡಿಸಿ ರಂಗ ನಡೆಯನ್ನು ತಿಳಿಸಿಕೊಟ್ಟಿದ್ದಾರೆ.
ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳಲ್ಲಿ ವೇಷ ಮಾಡಲು ತುಂಬಾ ಇಷ್ಟಪಡುತ್ತೇನೆ ಎಂದು ಸುಧೀರ್ ಅವರು ಹೇಳುತ್ತಾರೆ. ಹಟ್ಟಿಯಂಗಡಿ ಮೇಳದಲ್ಲಿರುವಾಗ “ಮಂತ್ರ ಮಯೂರಿ” ಪ್ರಸಂಗದ ಮಯೂರಿ ಪಾತ್ರ ಇವರಿಗೆ ಒಳ್ಳೆಯ ಹೆಸರು ಕೊಟ್ಟಿತ್ತು.
ರಂಗಕ್ಕೆ ಹೋಗುವ ಮೊದಲು ಯಾವುದೇ ಪಾತ್ರ ಬಂದಾಗ ಹಿರಿಯ ಕಲಾವಿದರ ಬಳಿ ಕೇಳಿ ಪಾತ್ರಕ್ಕೆ ಬೇಕಾದ ವಿಷಯವನ್ನು ಬರೆದಿಟ್ಟುಕೊಂಡು ತಯಾರಾಗುತ್ತೇನೆ ಹಾಗೂ ಎಂ.ಕೆ ರಮೇಶ್ ಆಚಾರ್ಯ, ಕೊಂಡದಕುಳಿ ರಾಮಚಂದ್ರ ಹೆಗಡೆ, ಜಯನಂದ್ ಹೊಳೆಕೊಪ್ಪ, ಸುರೇಶ್ ಶೆಟ್ಟಿ ಶಂಕರನಾರಾಯಣ ಮುಂತಾದ ಹಲವು ಹಿರಿಯ ಕಲಾವಿದರು ಹೆಚ್ಚಿನ ಮಾಹಿತಿಯನ್ನು ಹೇಳಿಕೊಟ್ಟಿದ್ದಾರೆ ಎಂದು ಸುಧೀರ್ ಉಪ್ಪೂರು ಅವರು ಹೇಳುತ್ತಾರೆ.
ಇವರು ತಮ್ಮ ಡಿಗ್ರಿ ಮುಗಿಸಿದ ಬಳಿಕ ಸುಬ್ರಹ್ಮಣ್ಯ ಧಾರೇಶ್ವರ ಭಾಗವತರ ನಿರ್ದೇಶನದ ನೀಲಾವರ ಮೇಳಕ್ಕೆ ಸೇರಿದರು.ಅದು ಇವರ ಯಕ್ಷ ಪಯಣಕ್ಕೆ ಭದ್ರ ಪಂಚಾಂಗವಾಗಿತ್ತು. ಧಾರೇಶ್ವರ ಭಾಗವತರ ರಂಗ ನಡೆ, ಪಾತ್ರದ ನಿರ್ವಹಣೆಯನ್ನು, ಎದುರು ಪಾತ್ರಧಾರಿ ನಡೆಸುವ ಸಂಭಾಷಣೆ ಯಾವ ಪಾತ್ರಕ್ಕೆ ಎಷ್ಟು ನಾಟ್ಯ ಮಾಡಬೇಕು ಅದೆಲ್ಲವನ್ನು ನೀಲಾವರ ಮೇಳದಲ್ಲಿ ಧಾರೇಶ್ವರ ಭಾಗವತರು ನನಗೆ ಹೇಳಿಕೊಟ್ಟಿದ್ದಾರೆ ಎಂದು ಹೇಳುವ ಅವರು ನೀಲಾವರ ಮೇಳದ ತಿರುಗಾಟದ ನಂತರ ವಕ್ವಾಡಿ ರಂಜಿತ್ ಶೆಟ್ಟಿಯವರ ಯಜಮಾನಿಕೆಯ ಹಟ್ಟಿಯಂಗಡಿ ಮೇಳದಲ್ಲಿ ಶ್ರೀಯುತ ಹಳ್ಳಾಡಿ ಜಯರಾಮ ಶೆಟ್ಟರಂತಹ ಹಿರಿಯ ಕಲಾವಿದರ ಜೊತೆಯಲ್ಲಿ ಬೇಳೂರು ವಿಷ್ಣುಮೂರ್ತಿ ನಾಯಕ್ ಅವರ ನಿರ್ದೇಶನದಲ್ಲಿ ಅವರ ಹೊಸ ಪ್ರಸಂಗದಲ್ಲಿ ನಾಲ್ಕು ವರ್ಷ ತಿರುಗಾಟ ಮಾಡಿ ಪೆರ್ಡೂರು ಮೇಳಕ್ಕೆ ಸೇರಿ ಉತ್ತಮ ಹೆಸರು ಪಡೆದ ಅವರು ಇದೀಗ ಇದೀಗ ಹಾಲಾಡಿ ಬಯಲಾಟ ಮೇಳದಲ್ಲಿ ತಿರುಗಾಟ ಮಾಡಲಿದ್ದಾರೆ.






