ಜನಮನ

ಮೂವರನ್ನು ರಕ್ಷಿಸಿ, ತಾನೇ ಪ್ರಾಣತೆತ್ತ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ್ ಕುಟುಂಬಕ್ಕೆ ಮಾನವೀಯ ನೆರವು

Views: 9

ಕುಂದಾಪುರ: ಶಂಕರನಾರಾಯಣ ಮದರ್ ತೆರೆಸಾ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ ಅವರು ಮೇ 29ರಂದು ಕುಂದಾಪುರ ತಾಲೂಕಿನ ಉಳ್ಳೂರು- ಕಾಡಿನಕೊಂಡ ತಮ್ಮ ಮನೆಯ ಸಮೀಪ ಬೊಬ್ಬರ್ಯನ ಕೊಡ್ಲು ಮದಗಕ್ಕೆ ಇಳಿದು ಮುಳುಗುತ್ತಿರುವ ಮೂವರನ್ನು ಮೇಲಕ್ಕೆತ್ತಿ ಪ್ರಾಣ ರಕ್ಷಣೆ ಮಾಡಿ, ನಂತರ ಭರತ್ ಶೆಟ್ಟಿಗಾರ್ ಎಂಬ ಬಾಲಕನನ್ನು ರಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಬಾಲಕನೊಂದಿಗೆ ತಾನು ಮದಗದಲ್ಲಿ ಮುಳುಗಿ ಪ್ರಾಣತೆತ್ತ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ್ ಕುಟುಂಬಕ್ಕೆ ಆತ ಸೇವೆ ಸಲ್ಲಿಸಿದ ಶಿಕ್ಷಣ ಸಂಸ್ಥೆ ,ರಾಜ್ಯ ಗಣಿತೋತ್ಸವ ಸಂಘ, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸ್ನೇಹಿತರಿಂದ ಸಂಗ್ರಹಿಸಿದ ಹಣಕಾಸಿನ ನೆರವನ್ನು ಆತನ ತಾಯಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಶಂಕರನಾರಾಯಣ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯಿಂದ 50,000 ರೂ, ಇದೇ ಸಂಸ್ಥೆಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಂದ 71,000 ರೂ, ರಾಜ್ಯ ಮಟ್ಟದ ಗಣಿತೋತ್ಸವ ಸಂಘದಿಂದ 1,42,386 ರೂ,

ರಾಜೇಂದ್ರ ಶೆಟ್ಟಿಗಾರ್ ಅವರ ಶಾಲಾ-ಕಾಲೇಜು, ವಿದ್ಯಾರ್ಥಿಗಳು ಮತ್ತು ಸ್ನೇಹಿತರಿಂದ 1,10,600 ರೂ. ಒಟ್ಟು ಸಂಗ್ರಹಿಸಿದ 3,74,476 ರೂ, ಮೊತ್ತವನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಅದರಿಂದ ಬರುವ ಮಾಸಿಕ ಬಡ್ಡಿ ಹಣವನ್ನು ರಾಜೇಂದ್ರನ ತಾಯಿಗೆ ನೀಡುವುದಾಗಿ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಸಹಾಯಧನವನ್ನು ಕುಟುಂಬಕ್ಕೆ ಹಸ್ತಾಂತರಿಸುವಲ್ಲಿ ಸಂಪರ್ಕ ಕೊಂಡಿಯಾಗಿ ಶ್ರಮಿಸಿದ ಸಂಖ್ಯಾಶಾಸ್ತ್ರ ಉಪನ್ಯಾಸಕ ಪ್ರಭಾಕರ ಶೆಟ್ಟಿಗಾರ್ ವಕ್ವಾಡಿ, ಶಂಕರನಾರಾಯಣ ಮದರ್ ತೆರೆಸಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿಗಳಾದ ಶಮಿತಾ ರಾವ್, ರೆನಿಟಾ ಲೋಬೊ, ಉಪನ್ಯಾಸಕರಾದ ರಸಿಕ್ ಶೆಟ್ಟಿ, ಶಿವರಾಮ್ ಮಂಗಳೂರು, ಯೋಗೀಶ್ ಮೈಸೂರು, ದಿವಂಗತ ರಾಜೇಂದ್ರ ಶೆಟ್ಟಿಗಾರ್ ಅವರ ಮನೆಗೆ ತೆರಳಿ ಸಹಾಯ ಧನದ ಠೇವಣಿ ಪತ್ರವನ್ನು ತಾಯಿಗೆ ಹಸ್ತಾಂತರಿಸಿದರು.

ರಾಜ್ಯಮಟ್ಟದ ಗಣಿತೋತ್ಸವ ಸಂಘಟನೆಯಿಂದ ರಾಜೇಂದ್ರನ ತಾಯಿಗೆ ಮಾಸಿಕ 1,500 ರೂ. ನೀಡಲಾಗುವುದೆಂದು ಘೋಷಿಸಿದರು,

ಮೂರನ್ನು ರಕ್ಷಿಸಿ ತಾನೂ ಪ್ರಾಣತೆತ್ತ ದಿವಂಗತ ರಾಜೇಂದ್ರ ಶೆಟ್ಟಿಗಾರ್ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡುವ ಕುರಿತು ಈಗಾಗಲೇ ಶಿಫಾರಸು ಪತ್ರವನ್ನು ಸರ್ಕಾರಕ್ಕೆ ಮನವಿ ನೀಡಲಾಯಿತು.

Related Articles

Back to top button