ಮುತ್ತಪ್ಪ ರೈ ಮಗ ರಿಕ್ಕಿ ರೈ ಮೇಲೆ ಗುಂಡಿನ ದಾಳಿ: ಮಣಿಪಾಲ್ ಆಸ್ಪತ್ರೆಗೆ ದಾಖಲು

Views: 183
ಕನ್ನಡ ಕರಾವಳಿ ಸುದ್ದಿ:ಮಾಜಿ ಡಾನ್ ಮುತ್ತಪ್ಪ ರೈ ಅವರ ಕಿರಿಯ ಪುತ್ರ ಹಾಗೂ ಉದ್ಯಮಿ ರಿಕ್ಕಿ ರೈ ಅವರ ಮೇಲೆ ಗುಂಡಿನ ದಾಳಿ ನಡೆದಿರುವ ಘಟನೆ ಶುಕ್ರವಾರ ತಡರಾತ್ರಿ ರಾಮನಗರದ ಬಿಡದಿ ಬಳಿ ನಡೆದಿದೆ.
ಶುಕ್ರವಾರ ರಾತ್ರಿ 11:30ರ ಸುಮಾರಿಗೆ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದ ರಿಕ್ಕಿ ರೈ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ರಿಕ್ಕಿ ಮೂಗು ಹಾಗೂ ಕೈಗಳಿಗೆ ಗುಂಡೇಟು ತಗುಲಿದೆ. ಅವರನ್ನು ಬೆಂಗಳೂರಿನ ಹೆಚ್ಎಎಲ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ರಿಕ್ಕಿ ರೈ ಎರಡು ದಿನಗಳ ಹಿಂದಷ್ಟೆ ರಷ್ಯಾದಿಂದ ವಾಪಾಸಾಗಿದ್ದರು. ತಡರಾತ್ರಿ ಬೆಂಗಳೂರಿನತ್ತ ಹೊರಟಿರುವ ರಿಕ್ಕಿ ಕಾರು ಮನೆಯಿಂದ ರಸ್ತೆಗಿಳಿಯುತ್ತಿದ್ದಂತೆ, ದುಷ್ಕರ್ಮಿಯಿಂದ ಗುಂಡಿನ ದಾಳಿ ನಡೆದಿದೆ. ರಸ್ತೆಯ ಪಕ್ಕದ ಖಾಸಗಿ ಜಾಗಕ್ಕೆ ಹಾಕಲಾಗಿದ್ದ ಕಾಂಪೌಂಡ್‌ನಲ್ಲಿದ್ದ ದೊಡ್ಡ ರಂಧ್ರದ ಸಹಾಯದಿಂದ ಗುಂಡು ಹಾರಿಸಲಾಗಿದೆ.
ಸಾಮಾನ್ಯವಾಗಿ ಕಾರನ್ನು ತಾವೇ ಚಲಾಯಿಸುತ್ತಿದ್ದ ರಿಕ್ಕಿ ರೈ ತಡರಾತ್ರಿ ತಮ್ಮ ಅಂಗರಕ್ಷಕನೊಂದಿಗೆ ಕಾರಿನ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದರು. ಗುಂಡು ಹಾರುತ್ತಿದ್ದಂತೆ ಕಾರಿನ ಚಾಲಕ ಬಸವರಾಜ್ ಮುಂದೆ ಬಾಗಿದ್ದು, ಗುಂಡೇಟಿನಿಂದ ಪಾರಾಗಿದ್ದಾರೆ. ಕಾರಿನ ಬಲಭಾಗದ ಹಿಂಬದಿ ಸೀಟ್‌ನಲ್ಲಿದ್ದ ರಿಕ್ಕಿಗೆ ಗುಂಡು ತಗುಲಿದೆ.
ಎಫ್ಎಸ್ಎಲ್ ಅಧಿಕಾರಿಗಳು ಸ್ಥಳ ಶೋಧನೆ ನಡೆಸಿದ್ದು, ವರದಿ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ” ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.