ಮದುವೆ ಮನೆಗೆ ನುಗ್ಗಿದ ಚಿರತೆ, ವಧು-ವರರು ಸೇರಿ ದಿಕ್ಕಾಪಾಲಾಗಿ ಓಡಿದ ಜನರು!

Views: 215
ಕನ್ನಡ ಕರಾವಳಿ ಸುದ್ದಿ :ಮದುವೆ ಮನೆಯೊಂದಕ್ಕೆ ಚಿರತೆಯೊಂದು ನುಗ್ಗಿದ್ದು, ತೀವ್ರ ಆತಂಕಕ್ಕೆ ಕಾರಣವಾಯಿತು. ಘಟನೆಯಲ್ಲಿ ಅರಣ್ಯಾಧಿಕಾರಿಯೊಬ್ಬರು ಗಾಯಗೊಂಡಿದ್ದು, ಜೀವ ಉಳಿಸಿಕೊಳ್ಳಲು ಓಡಿದ ವಧು-ವರರು ಕಾರಿನಲ್ಲಿ ಸಿಲುಕಿಕೊಳ್ಳುವಂತಾಯಿತು.
ನಗರದ ಬುದ್ಧೇಶ್ವರ ರಸ್ತೆ ಪ್ರದೇಶದಲ್ಲಿ ಬುಧವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಚಿರತೆ ಬ್ಯಾಂಕ್ವೆಟ್ ಹಾಲ್‌ಗೆ ಪ್ರವೇಶಿಸಿದ ಕೂಡಲೇ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಧಿಕ್ಕಾಪಾಲಾಗಿ ಓಡಿದರು. ಸ್ಥಳದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಚಿರತೆ ನುಗ್ಗುತ್ತಿದ್ದಂತೆ ಮಂಟಪದಲ್ಲಿ ಕುಳಿತಿದ್ದ ವಧು-ವರರೂ ಕೂಡ ಓಡಿ ಹೋಗಿ ಕಾರಿನಲ್ಲಿ ಲಾಕ್ ಮಾಡಿಕೊಂಡಿದ್ದಾರೆ.
ತಕ್ಷಣ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಹಲವು ಗಂಟೆಗಳ ಪ್ರಯತ್ನದ ನಂತರ ತಡರಾತ್ರಿ 2 ಗಂಟೆ ಸುಮಾರಿಗೆ ಚಿರತೆಯನ್ನು ಸೆರೆಹಿಡಿಯಲಾಗಿದೆ.
ಪೊಲೀಸರ ಪ್ರಕಾರ, ಚಿರತೆ ಹಿಡಿಯುವ ವೇಳೆ ಅರಣ್ಯ ಇಲಾಖೆ ಅಧಿಕಾರಿ ಮುಕದ್ದರ್ ಅಲಿ ಅವರ ಕೈಗೆ ಗಾಯಗಳಾಗಿವೆ. ಚಿರತೆ ಹಿಡಿಯುವವರೆಗೂ, ವಧು ಮತ್ತು ವರರ ಕುಟುಂಬದವರು ಸುರಕ್ಷತೆಗಾಗಿ ತಮ್ಮ ವಾಹನಗಳಲ್ಲಿ ಕುಳಿತಿದ್ದರು ಎಂದು ಅತಿಥಿಯೊಬ್ಬರು ಹೇಳಿದ್ದಾರೆ.