ದಯಾನಂದ ಎಸ್.ಬಳೆಗಾರ್ ಅವರಿಗೆ ಸಾಧನಾ ಸಂಮಾನ್ ಪ್ರಶಸ್ತಿ ಪ್ರದಾನ

Views: 29
ಕನ್ನಡ ಕರಾವಳಿ ಸುದ್ದಿ: ಮರವಂತೆಯ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ದಯಾನಂದ ಎಸ್.ಬಳೆಗಾರ್ ಅವರಿಗೆ ಸಾಧನಾ ಸಂಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮರವಂತೆಯ ಸಾಧನಾ ಸಮಾಜ ಸೇವಾ ವೇದಿಕೆ ನಲವತ್ತಮೂರು ವರ್ಷಗಳಿಂದ ಕ್ರಿಯಾಶೀಲವಾಗಿ ಮುನ್ನಡೆಯುತ್ತಿರುವುದು ಒಂದು ಅಪೂರ್ವದ ದಾಖಲೆ. ಈ ಅವಧಿಯ ಅದರ ಸಾಧನೆಗಳು, ಊರಿಗೆ ನೀಡಿದ ಕೊಡುಗೆಗಳು ಅನುಪಮ ಎಂದು ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಂ. ಭಾಸ್ಕರ ಮಯ್ಯ ಮೆಚ್ಚುಗೆ ಸೂಚಿಸಿದರು.
ಅವರು ಶಾಲೆಯ ಐ. ವಸಂತಕುಮಾರಿ ಕಲಾಂಗಣದಲ್ಲಿ ಭಾನುವಾರ ನಡೆದ ಸಾಧನಾ ಸಂಸ್ಥಾಪನಾ ದಿನಾಚರಣೆಯ ಮುಖ್ಯ ಅತಿಥಿಯಾಗಿದ್ದರು.
ಊರಿನ ಸಾಧಕರನ್ನು, ಸೇವಾತತ್ಪರರನ್ನು ಗುರುತಿಸಿ ಗೌರವಿಸಲು ಸಾಧನಾ ಪ್ರಶಸ್ತಿ ಸ್ಥಾಪಿಸಿರುವುದು ಉತ್ತಮ ನಡೆ. ಮೊದಲ ವರ್ಷದ ಪ್ರಶಸ್ತಿಯನ್ನು ಊರಿನ ಶಾಲೆಗಳ ಅಭಿವೃದ್ಧಿಗೆ ಸಂಘಟಿತವಾಗಿ ಶ್ರಮಿಸಿದ, ಸರಕಾರಿ ಶಾಲೆಗೆ ಮೊತ್ತಮೊದಲು ಬಸ್ ಖರೀದಿಸಿ ನೀಡುವುದರ ನೇತೃತ್ವ ವಹಿಸಿದ ದಯಾನಂದ ಎಸ್.ಬಳೆಗಾರ್ ಅವರಿಗೆ ನೀಡುತ್ತಿರುವುದರಿಂದ ಅವರಿಗೆ ಆ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಲು ಪ್ರೋತ್ಸಾಹ ನೀಡಿದಂತಾಗಿದೆ ಎಂದು ಮಯ್ಯ ಹೇಳಿದರು.
ಸಮಾರಂಭದಲ್ಲಿ ದಯಾನಂದ ಬಳೆಗಾರರಿಗೆ ಸಾಧನಾ ಸಂಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಪತ್ನಿ ಸೀತಾ ಜೋಗಿ ಅವರಿಗೆ ನೆನಪಿನ ಕಾಣಿಕೆ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳೆಗಾರ್, ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಸಾಧನಾ ಅಧ್ಯಕ್ಷ ಪುಟ್ಟ ಎಂ. ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಎಂ. ಶಂಕರ ಖಾರ್ವಿ ಸ್ವಾಗತಿಸಿದರು. ಸೋಮಯ್ಯ ಬಿಲ್ಲವ ಸಾಧನಾ ನಡೆದು ಬಂದ ದಾರಿ ಕುರಿತು ಮಾತನಾಡಿದರು. ದೇವಿದಾಸ ಶ್ಯಾನುಭಾಗ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ನಾಗೇಶ ಎಸ್. ರಾವ್ ಪ್ರಶಸ್ತಿಪತ್ರ ಓದಿದರು. ಬಾಬು ಮಡಿವಾಳ ಬಹುಮಾನಿತರ ಪಟ್ಟಿ ಓದಿದರು. ಸೀತಾರಾಮ ಮಡಿವಾಳ ವಂದಿಸಿದರು. ಜತೀಂದ್ರ ಮರವಂತೆ ನಿರೂಪಿಸಿದರು.
ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಮರವಂತೆ, ಕೋಶಾಧಿಕಾರಿ ಚಂದ್ರ ಬಿಲ್ಲವ, ಕಾರ್ಯದರ್ಶಿ ಶೇಷಗಿರಿ ಆಚಾರ್, ಎಲ್ಲ ಸದಸ್ಯರು ಇದ್ದರು.
ಆರಂಭದಲ್ಲಿ ಶ್ರೀವರ್ಷ, ಧನ್ಯತಾ ಶ್ಯಾನುಭಾಗ್, ಜತೀಂದ್ರ ಗಾನಸೌರಭ ಪ್ರಸ್ತುತಪಡಿಸಿದರು. ಗಣರಾಜ್ಯ ದಿನದಂದು ಸಾಧನಾ ವೇದಿಕೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಷ್ಟ್ರ ಧ್ವಜ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸತೀಶ ಹೆಮ್ಮಾಡಿ ನೇತೃತ್ವದ ಭ್ರಮಾಲೋಕ ಜಾದೂ ತಂಡ ಪ್ರದರ್ಶಿಸಿದ ಜಾದೂಜಾತ್ರೆ ಜನರನ್ನು ರಂಜಿಸಿತು.