ಕೋಟೇಶ್ವರದ ಕೊಡಿ ಹಬ್ಬದಲ್ಲಿ ಚಿನ್ನದ ಕರಿಮಣಿ ಸರ ಕದ್ದ ಆರೋಪಿಗಳ ಬಂಧನ, ಪೊಲೀಸರಿಗೆ ಒದಗಿಸಿದ ಈ ಸುಳಿವು?
Views: 0
ಕನ್ನಡ ಕರಾವಳಿ ಸುದ್ದಿ: ಕೋಟೇಶ್ವರ ಕೊಡಿ ಹಬ್ಬದಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೈನ್ ಇನ್ ಸೆಕ್ಯುರಿಟಿ ಸಂಸ್ಥೆ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳು ಆರೋಪಿಗಳ ಪತ್ತೆಗೆ ಮಹತ್ವದ ಸುಳಿವು ಒದಗಿಸಿವೆ.
ಕೊಡಗು ಜಿಲ್ಲೆಯ ಕುಶಾಲನಗರದ ಭಾಗ್ಯ (39), ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅಶ್ವಿನಿ ಅಲಿಯಾಸ್ ಗಾಯತ್ರಿ (25), ಕಾಮಾಚಿ (50), ಕೃಷ್ಣಗಿರಿ ಜಿಲ್ಲೆಯ ಆದಮ್ಮಾಳ್ ಅಲಿಯಾಸ್ ಆದ್ಯಾಮ್ಮ (49) ಹಾಗೂ ಕುಶಾಲನಗರದ ಎಸ್. ನಾಗರಾಜ (48) ಬಂಧಿತ ಆರೋಪಿಗಳು.
ನ.24ರಂದು ಗೀತಾ ಅವರು ಪತಿಯೊಂದಿಗೆ ಔಷಧ ತರಲು ಕುಂದಾಪುರಕ್ಕೆ ತೆರಳುತ್ತಿದ್ದ ವೇಳೆ ಕೋಟೇಶ್ವರದಲ್ಲಿ ಕೊಡಿ ಹಬ್ಬ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಬೈಪಾಸ್ನಲ್ಲಿ ಬಸ್ನಿಂದ ಇಳಿದು ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಬೆಳಗ್ಗೆ 11.30ರ ಸುಮಾರಿಗೆ ದೇವರ ದರ್ಶನ ಪಡೆದು ಪ್ರದಕ್ಷಿಣೆ ಹಾಕಿದ್ದ ಅವರು, ಮಧ್ಯಾಹ್ನ 12.30ರ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರಭಾಗದಲ್ಲಿ ಊಟದ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಜನಜಂಗುಳಿಯನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು ಅವರ ಕುತ್ತಿಗೆಯಲ್ಲಿದ್ದ ಸುಮಾರು 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಕಳವುಗೈದು ಪರಾರಿಯಾಗಿದ್ದರು. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕೊಡಿ ಹಬ್ಬದ ಹಿನ್ನೆಲೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನ ಹಾಗೂ ರಥಬೀದಿಯ ಸುತ್ತಮುತ್ತ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ವತಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಮಹಿಳೆಯ ಕರಿಮಣಿ ಸರ ಕಳವುಗೈದ ಹಾಗೂ ಆರೋಪಿಗಳು ವಾಹನದಲ್ಲಿ ಪರಾರಿಯಾಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಸೈನ್ ಇನ್ ಸೆಕ್ಯುರಿಟಿ ಸಂಸ್ಥೆ ಪೊಲೀಸರಿಗೆ ಒದಗಿಸಿದ ಮಹತ್ವದ ದಾಖಲೆಗಳು ಹಾಗೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಬೆನ್ನುಹತ್ತಿದ ಕುಂದಾಪುರ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಕಳವುಗೈದಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ 7 ಪವನ್ ತೂಕದ ಚಿನ್ನದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ್ದ 3 ಲಕ್ಷ ರೂ. ಮೌಲ್ಯದ ಕೆಎ 01 ಎಂಆರ್ 7991 ನೋಂದಣಿ ಸಂಖ್ಯೆಯ ಮಹೀಂದ್ರಾ ಟಿಯುವಿ 300 ಕಾರು ಹಾಗೂ 7 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಐವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ನಿರೀಕ್ಷಕ ಜಯರಾಮ್ ಡಿ. ಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಪಿಎಸ್ಐಗಳಾದ ನಂಜಾನಾಯ್ ಪುಷ್ಪ ಹಾಗೂ ಸಿಬ್ಬಂದಿಗಳಾದ ಮೋಹನ, ಸಂತೋಷಕುಮಾರ್, ಮಹಾಬಲ ಶೆಟ್ಟಿಗಾರ, ಚಂದ್ರಶೇಖರ ಅರೆಶಿರೂರು, ಘನಶ್ಯಾಮ್, ಸಂತೋಷ ದೇವಾಡಿಗ, ಗೌತಮ, ಲೋಹಿತ್, ನಾರಾಯಣ, ಪದ್ಮಾವತಿ, ರೇವತಿ, ಭಾಗೀರಥಿ, ಚಾಲಕ ಎಆರ್ಎಸ್ಐ ರಾಜು ಭೋವಿ, ಖಾಸಿಮ್ ಜಮಾದಾರ್ ಹಾಗೂ ಆರ್ಡಿಸಿ ವಿಭಾಗದ ದಿನೇಶ್ ಮತ್ತು ನಿತೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.






