ಜನಮನ

ಪಡಿತರ ಕಾರ್ಡ್‌ ಹಿಡಿದು ನ್ಯಾಯಬೆಲೆ ಅಂಗಡಿಗೆ ಹೋಗಬೇಕಿಲ್ಲ: ಶೀಘ್ರದಲ್ಲೇ ಬರಲಿದೆ ʼಸೆಂಟ್ರಲ್‌ ಬ್ಯಾಂಕಿಂಗ್ ಡಿಜಿಟಲ್‌ ಕರೆನ್ಸಿ‌

Views: 0

ಕನ್ನಡ ಕರಾವಳಿ ಸುದ್ದಿ: ಪಡಿತರ ಅಕ್ಕಿ ಪಡೆಯಲು ಇನ್ನು ಪ್ರತಿ ತಿಂಗಳು ಪಡಿತರ ಕಾರ್ಡ್‌ ಹಿಡಿದು ನ್ಯಾಯಬೆಲೆ ಅಂಗಡಿಗೆ ಹೋಗಬೇಕಿಲ್ಲ, ಬದಲಿಗೆ ತಮ್ಮ ಮೊಬೈಲ್‌ಗೆ ಬರುವ ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ ಬಳಸಿಕೊಂಡು, ನಿಗದಿತ ಅವಧಿಯೊಳಗೆ, ತಮಗೆ ಅನುಕೂಲವಾದಾಗ ಇದನ್ನು ತೋರಿಸಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದು.

ಇಂಥ ವಿಶಿಷ್ಟ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ನಿರ್ಧರಿಸಿದೆ. ಆರಂಭದಲ್ಲಿ ಕೇಂದ್ರದ ಪಾಲಿನ 5 ಕೆ.ಜಿ ಅಕ್ಕಿಗೆ ಕೂಪನ್‌ ವ್ಯವಸ್ಥೆ ಜಾರಿಗೆ ಬರಲಿದೆ.

ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ (ಪಿಡಿಎಸ್‌) ಕ್ರಾಂತಿಕಾರಿ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ 80 ಕೋಟಿ ಜನರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಫಲಾನುಭವಿಗಳಿಗೆ ನ್ಯಾಯಯುತವಾಗಿ ತಮ್ಮ ಪಾಲಿನ ಪಡಿತರ ನೀಡುವುದು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ಮೋಸವಾಗುವುದನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಅಂತ್ಯೋದಯ ಅನ್ನ ಯೋಜನೆ (ಎಎವೈ), ಪಡಿತರ ಚೀಟಿ ಮತ್ತು ಆದ್ಯತಾ ಕುಟುಂಬ (ಪಿಎಚ್‌ಎಚ್‌) ಪಡಿತರ ಚೀಟಿಗಳು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ನೀಡುವ ಪ್ರಮುಖ ಪಡಿತರ ಚೀಟಿಗಳು. ಅಂತ್ಯೋದಯ ಪ್ರತಿ ಕಾರ್ಡ್‌ಗೆ ತಿಂಗಳಿಗೆ 35 ಕೆ.ಜಿ. ಆಹಾರ ಧಾನ್ಯ ಹಾಗೂ ಆದ್ಯತಾ ಚೀಟಿಗೆ ಕುಟುಂಬದ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ತಲಾ 5 ಕೆ.ಜಿ. ಆಹಾರ ಧಾನ್ಯ ವಿತರಿಸಲಾಗುತ್ತಿದೆ. (ರಾಜ್ಯದಲ್ಲಿ ಸದ್ಯ ಜಾರಿಯಲ್ಲಿರುವುದು ಪ್ರತಿ ಸದಸ್ಯರಿಗೆ ಕೇಂದ್ರದ ಪಾಲು 5 ಕೆ.ಜಿ., ರಾಜ್ಯದ ಪಾಲು 5 ಕೆ.ಜಿ. ಸೇರಿ ಒಟ್ಟು 10 ಕೆ.ಜಿ.) ರಾಜ್ಯದಲ್ಲಿ ಒಟ್ಟು 10,44,373 ಅಂತ್ಯೋದಯ ಅನ್ನ ಯೋಜನೆ ಕಾರ್ಡ್‌ಗಳಿದ್ದು, 42,63,986 ಮಂದಿ ಫಲಾನುಭವಿಗಳಿದ್ದಾರೆ. ಅಲ್ಲದೆ, 1,14,47,467 ಆದ್ಯತಾ ಕುಟುಂಬ (ಪಿಎಚ್‌ಎಚ್‌/ಬಿಪಿಎಲ್‌) ಪಡಿತರ ಚೀಟಿಗಳಿದ್ದು, 4,03,41,377 ಮಂದಿ ಫಲಾನುಭವಿಗಳಿದ್ದಾರೆ. ಒಟ್ಟು 1,24,91,840 ಕಾರ್ಡ್‌ಗಳು, 4,46,05,363 ಮಂದಿ ಫಲಾನುಭವಿಗಳಿದ್ದಾರೆ.

ಓಪನ್‌ ಮಾರ್ಕೆಟ್‌ ಸೇಲ್ಸ್‌ ಸ್ಕೀಮ್‌/ಸವೀರ್‍ಸ್‌ (ಓಎಂಎಸ್‌ಎಸ್‌) ಆಧಾರದಲ್ಲಿ ಪ್ರತಿ ತಿಂಗಳು ಬೆಲೆ ದರ ನಿಗದಿಪಡಿಸಿ ಫಲಾನುಭವಿಗಳಿಗೆ ಕೆ.ಜಿಗೆ ಅಂದಾಜು ಸುಮಾರು 40-45 ರೂ.ಗಳಂತೆ ಕೇಂದ್ರದ ಪಾಲಿನ ಅಕ್ಕಿಯ ಮೊತ್ತವು ಡಿಜಿಟಲ್‌ ವ್ಯಾಲೆಟ್‌ ಮೂಲಕ ನೋಂದಾಯಿತ ಮೊಬೈಲ್‌ಗೆ ಪ್ರತಿ ತಿಂಗಳು ರವಾನೆಯಾಗುತ್ತದೆ. ಜತೆಗೆ ಪಿಡಿಎಸ್‌ ಮೂಲಕ ವಿತರಿಸಲು ಕೇಂದ್ರ ಸರ್ಕಾರವು ಭಾರತೀಯ ಆಹಾರ ನಿಗಮದ ಮೂಲಕ ಅಕ್ಕಿಯನ್ನು ಎಂದಿನಂತೆ ರಾಜ್ಯಕ್ಕೆ ಪೂರೈಸಲಿದೆ. ಗ್ರಾಹಕರು ವ್ಯಾಲೆಟ್‌ನಲ್ಲಿ ಲಭ್ಯವಾಗುವ ಈ ಡಿಜಿಟಲ್‌ ಕರೆನ್ಸಿಯನ್ನು ನ್ಯಾಯಬೆಲೆ ಅಂಗಡಿಗಳಿಗೆ ನೀಡಿ ಅಥವಾ ಕ್ಯೂಆರ್‌ ಕೋಡ್‌ ಮಾದರಿಯಲ್ಲಿ ಸ್ಕ್ಯಾನ್‌ ಮಾಡುವ ಮೂಲಕ ಅಕ್ಕಿ ಪಡೆಯಬಹುದು. ಡಿಜಿಟಲ್‌ ಕರೆನ್ಸಿಗೆ ನಿಗದಿತ ಕಾಲಮಿತಿ ಇರಲಿದೆ. ಅಷ್ಟರ ಒಳಗಾಗಿ ಪಡಿತರ ಪಡೆದುಕೊಳ್ಳದಿದ್ದರೆ ಅದರ ಮಾನ್ಯತೆ ರದ್ದಾಗುತ್ತದೆ. ಈ ವ್ಯವಸ್ಥೆಯಿಂದ ಅಕ್ಕಿ ದುರುಪಯೋಗ ತಡೆಗೆ ನೆರವಾಗಲಿದೆ. ಫಲಾನುಭವಿ ಅಥವಾ ನ್ಯಾಯಬೆಲೆ ಅಂಗಡಿ ಮಾಲೀಕರು ಈ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ.

Related Articles

Back to top button
error: Content is protected !!