ಒಳ ಉಡುಪಲ್ಲಿ ಕಂತೆ ಕಂತೆ ಹಣ ಪತ್ತೆ, ಶಬರಿಮಲೆ ಭಕ್ತರೇ ಈ ಖತರ್ನಾಕ್ ಮಹಿಳೆಯರ ಟಾರ್ಗೆಟ್!
Views: 151
ಕನ್ನಡ ಕರಾವಳಿ ಸುದ್ದಿ: ಲಕ್ಷಾಂತರ ಅಯ್ಯಪ್ಪ ಭಕ್ತರು ಕೇರಳದತ್ತ ಹೆಜ್ಜೆ ಹಾಕುತ್ತಿದ್ದಾರೆ. ಭಕ್ತರ ಈ ಜನಸಂದಣಿಯನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ ನಡೆಸಲು ತಮಿಳುನಾಡಿನಿಂದ ಕೇರಳಕ್ಕೆ ಬಂದಿದ್ದ ಇಬ್ಬರು ಖತರ್ನಾಕ್ ಮಹಿಳೆಯರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ವ್ಯವಸ್ಥಿತ ಸಂಚು ರೂಪಿಸಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬರುವ ಭಕ್ತರ ಹಣ ಹಾಗೂ ಚಿನ್ನಾಭರಣ ದೋಚಲು ಹೊಂಚು ಹಾಕುತ್ತಿದ್ದ ಈ ಇಬ್ಬರು ಮಹಿಳೆಯರನ್ನು ಕೇರಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ಮಧ್ಯಾಹ್ನ ಈ ಇಬ್ಬರು ಮಹಿಳೆಯರು ಕೋಝೆಂಚೇರಿಯಿಂದ ರಾಣಿ ಕಡೆಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ಮಧ್ಯೆ ಬಸ್‌ನಲ್ಲೇ ತಮ್ಮ ಬಟ್ಟೆಗಳನ್ನು ಬದಲಾಯಿಸುತ್ತಿದ್ದುದನ್ನು ಗಮನಿಸಿದ ಬಸ್ ಸಿಬ್ಬಂದಿಗೆ ಇವರ ನಡವಳಿಕೆಯ ಮೇಲೆ ತೀವ್ರ ಅನುಮಾನ ಮೂಡಿದೆ.
ಕೂಡಲೇ ಸಮಯಪ್ರಜ್ಞೆ ಮೆರೆದ ಬಸ್ ಸಿಬ್ಬಂದಿ ಈ ಕುರಿತು ರಾಣಿ ಸ್ಪೆಷಲ್ ಬ್ರಾಂಚ್ ಅಧಿಕಾರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯ ಪೊಲೀಸರು, ರಾಣಿ ಪೊಲೀಸ್ ಠಾಣೆಯ ಬಳಿ ಬಸ್ ಅನ್ನು ತಡೆದು ನಿಲ್ಲಿಸಿ ಇಬ್ಬರೂ ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಮಹಿಳೆಯರನ್ನು ಠಾಣೆಗೆ ಕರೆತಂದು ತೀವ್ರ ತಪಾಸಣೆಗೆ ಒಳಪಡಿಸಿದಾಗ ಪೊಲೀಸರೇ ಒಂದು ಕ್ಷಣ ದಂಗಾಗುವಂತಹ ಸಂಗತಿ ಬಯಲಾಗಿದೆ. ತಪಾಸಣೆಯ ವೇಳೆ ಓರ್ವ ಮಹಿಳೆಯ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 21,000 ರೂಪಾಯಿ ನಗದು ಹಣ ಪತ್ತೆಯಾಗಿದೆ.
ಇದಾದ ಬಳಿಕ ಪೊಲೀಸರು ಈ ಇಬ್ಬರ ಫೋಟೋಗಳನ್ನು ಆಧರಿಸಿ ಅವರ ಹಿನ್ನೆಲೆಯನ್ನು ಪರಿಶೀಲಿಸಿದಾಗ, ಇವರು ಅಂತಾರಾಜ್ಯ ಕಳ್ಳಿಯರೆಂಬುದು ದೃಢಪಟ್ಟಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಲವಾರು ಕಳ್ಳತನ ಪ್ರಕರಣಗಳಲ್ಲಿ ಇವರು ಭಾಗಿಯಾಗಿರುವ ಪ್ರಮುಖ ಸತ್ಯಾಂಶ ತನಿಖೆಯಿಂದ ಹೊರಬಿದ್ದಿದೆ.
ಬಂಧಿತ ಆರೋಪಿಗಳನ್ನು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಭವಾನಿ ಅಲಿಯಾಸ್ ಪಾರ್ವತಿ ಮತ್ತು ತೂತ್ತುಕುಡಿ ಜಿಲ್ಲೆಯ ಲಕ್ಷ್ಮಿ ಅಲಿಯಾಸ್ ಪಾರ್ವತಿ ಎಂದು ಗುರುತಿಸಲಾಗಿದೆ. ಶಬರಿಮಲೆ ಮಂಡಲ ಸೀಸನ್ ಹಿನ್ನೆಲೆಯಲ್ಲಿ ಎರುಮೇಲಿ ಹಾಗೂ ಇತರ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡುವ ಅಯ್ಯಪ್ಪ ಭಕ್ತರ ಗಮನ ಬೇರೆಡೆ ಸೆಳೆದು, ಅವರ ಬಳಿಯಿರುವ ನಗದು ಮತ್ತು ಬೆಲೆಬಾಳುವ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದಲೇ ಇವರು ಕೇರಳಕ್ಕೆ ಬಂದಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು, ಇವರ ಜಾಲದಲ್ಲಿ ಇನ್ನೂ ಯಾರಾದರೂ ಇದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ,






