45 ಕೋಟಿ ಭೂ ಹಗರಣ ಆರೋಪ: ತಹಶೀಲ್ದಾರ್ ವಿರುದ್ಧ ಇಲಾಖಾ ವಿಚಾರಣೆಗೆ ಶಿಫಾರಸ್ಸು
Views: 61
ಕನ್ನಡ ಕರಾವಳಿ ಸುದ್ದಿ: ತಹಶೀಲ್ದಾರ್ ಓರ್ವರ ವಿರುದ್ಧ ಬರೋಬ್ಬರಿ 45 ಕೋಟಿ ಭೂ ಹಗರಣದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕು ತಹಶ್ಲಿಲ್ದಾರ್ ಮನೀಷಾ ಪತ್ರಿ ಅವರ ವಿರುದ್ಧ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಬೃಹತ್ ಭೂ ಹಗರಣದ ಗಂಭೀರ ಆರೋಪ ಕೇಳಿಬಂದಿದೆ.
ಬಾಗೇಪಲ್ಲಿ ತಾಲೂಕಿನ ಪುಲವಾರಪಲ್ಲಿ ಗ್ರಾಮದ ನಾಲ್ವರು ರೈತರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಮ್ಮದೇ ಕಚೇರಿಯ ಗ್ರಾಮ ಸಹಾಯಕಿ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಿಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪುಲವಾರಪಲ್ಲಿ ಗ್ರಾಮದ ರೈತರಾದ ಕೆ.ವಿ. ಲಕ್ಷ್ಮಯ್ಯ, ಅಂಜನಪ್ಪ, ಅಕ್ಕಾಯಮ್ಮ ಹಾಗೂ ವೆಂಕಟರೆಡ್ಡಿ ಅವರಿಗೆ ಸೇರಿದ ಸುಮಾರು 15 ಎಕರೆ ಜಮೀನನ್ನು ಬಾಗೇಪಲ್ಲಿ ತಹಶೀಲ್ದಾರ್ ಕಚೇರಿಯ ಗ್ರಾಮ ಸಹಾಯಕಿ ಶಿವಮ್ಮ ಎಂಬುವವರ ಹೆಸರಿಗೆ ಅಕ್ರಮವಾಗಿ ಪೌತಿ ಖಾತೆ ಮಾಡಲಾಗಿತ್ತು. ಬರೋಬ್ಬರಿ 45 ಕೋಟಿ ರೂಪಾಯಿ ಮೌಲ್ಯದ ಈ ಜಮೀನನ್ನು ನಕಲಿ ದಾಖಲೆಗಳ ಮೂಲಕ ಶಿವಮ್ಮ ಹೆಸರಿಗೆ ವರ್ಗಾಯಿಸಿ, ಬಳಿಕ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಭೂಸ್ವಾಧೀನ ಮಾಡಿಸಿ ಕೋಟ್ಯಂತರ ರೂಪಾಯಿ ಪರಿಹಾರದ ಹಣ ಲಪಟಾಯಿಸುವ ಹುನ್ನಾರ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿರುದ್ಧ ತನಿಖೆ ನಡೆಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ತನಿಖಾ ತಂಡ ನೀಡಿದ ಮಧ್ಯಂತರ ವರದಿಯ ಆಧಾರದ ಮೇಲೆ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಖಾತೆಗೆ ಸಹಕರಿಸಿದ ಗ್ರಾಮ ಸಹಾಯಕಿ ಶಿವಮ್ಮ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಕಂದಾಯ ನಿರೀಕ್ಷಕ ಪ್ರಶಾಂತ್, ಗ್ರಾಮ ಆಡಳಿತಾಧಿಕಾರಿಗಳಾದ ಮಂಜುಳಾ ಬಾಳವ್ವಗೋಡ ಹಾಗೂ ಮಂಜುನಾಥ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಪ್ರಕರಣದ ಕೇಂದ್ರಬಿಂದುವಾಗಿರುವ ತಹಶೀಲ್ದಾರ್ ಮನೀಷಾ ಪತ್ರಿ ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಕೋರಿ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಭೂ ಅಕ್ರಮದ ವಿಚಾರ ಸಾರ್ವಜನಿಕವಾಗಿ ಬಯಲಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಳು, ತರಾತುರಿಯಲ್ಲಿ ಮತ್ತೆ ಮೂಲ ರೈತರ ಹೆಸರಿಗೆ ಪೌತಿ ಖಾತೆಯನ್ನು ಬದಲಾಯಿಸಿದ್ದಾರೆ.
ಇನ್ನು ತಮ್ಮ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಮನೀಷಾ ಪತ್ರಿ, ಪೌತಿ ಖಾತೆ ಮಾಡುವ ಸಂದರ್ಭದಲ್ಲಿ ಕಣ್ತಪ್ಪಿನಿಂದ ಖಾತೆ ಬದಲಾವಣೆಯಾಗಿದೆ. ತಾಂತ್ರಿಕವಾಗಿ ಆಟೋ ಮ್ಯುಟೇಷನ್ ಮೂಲಕ ಈ ಪ್ರಕ್ರಿಯೆ ನಡೆದಿದೆಯೇ ಹೊರತು, ಇದರಲ್ಲಿ ಯಾವುದೇ ಉದ್ದೇಶಪೂರ್ವಕ ಅಕ್ರಮ ಅಥವಾ ದುರುದ್ದೇಶವಿಲ್ಲಎಂದು ಸ್ಪಷ್ಟನೆ ನೀಡಿದ್ದಾರೆ.






