ಮೀನು ಸಾಗಾಟ ವಾಹನದಲ್ಲಿ ಗೋವಾದಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 35 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ
Views: 9
ಕನ್ನಡ ಕರಾವಳಿ ಸುದ್ದಿ: ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 35 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮೀನು ಸಾಗಿಸುವ ಇನ್ಸುಲೇಟೆಡ್ ಕಂಟೇನರ್‌ನಲ್ಲಿ ಆರೋಪಿಗಳು ಮದ್ಯವನ್ನು ಬಚ್ಚಿಟ್ಟು ಸಾಗಿಸುತ್ತಿದ್ದರು.ವಾಹನ ತಪಾಸಣೆ ಮಾಡುವಾಗ ಚಾಲಕ ಪರಾರಿಯಾಗಿದ್ದಾನೆ. ಮದ್ಯದೊಂದಿಗೆ 20 ಲಕ್ಷ ರೂ.ಮೌಲ್ಯದ ವಾಹನವನ್ನೂ ಜಪ್ತಿ ಮಾಡಲಾಗಿದೆ.
ಈ ಹಿಂದೆ ಗೋವಾದಿಂದ ಖಾನಾಪುರ ತಾಲ್ಲೂಕಿನ ಕಣಕುಂಬಿ ಮಾರ್ಗವಾಗಿ ರಾಜ್ಯಕ್ಕೆ ಮದ್ಯ ಸಾಗಣೆ ಮಾಡಲಾಗುತ್ತಿತ್ತು. ಈಗ ಅಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಿ ಹೆಚ್ಚಿನ ನಿಗಾ ವಹಿಸಲು ಆರಂಭಿಸಿದ ನಂತರ ಕಳ್ಳ ಸಾಗಣೆದಾರರು ರಾಜ್ಯ ಪ್ರವೇಶಕ್ಕೆ ಮಹಾರಾಷ್ಟ್ರದ ಬಾಚಿಯಂಥ ರಸ್ತೆ ಬಳಸಲು ಆರಂಭಿಸಿದ್ದಾರೆ. ಹಾಗಾಗಿ ಆ ಮಾರ್ಗವಾಗಿ ಸಾಗುತ್ತಿದ್ದ ವಾಹನ ತಪಾಸಸಿ, ಈ ಪ್ರಕರಣ ಭೇದಿಸಿದ್ದೇವೆ ಎಂದು ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಇಲ್ಲಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಸಂಶಯಾಸ್ಪದ ವಾಹನ ಬರುತ್ತಿದ್ದಂತೆ ಪಾಟೀಲ ನೇತೃತ್ವದ ತಂಡದವರು ತಡೆದು ಚಾಲಕನ ವಿಚಾರಣೆ ನಡೆಸಿದರು. ನಾನು ಈ ವಾಹನದಲ್ಲಿ ಮೀನು ತೆಗೆದುಕೊಂಡು ಹೋಗುತ್ತಿದ್ದೇನೆ ಎಂದು ಚಾಲಕ ತಿಳಿಸಿದ. ಆದರೆ, ವಾಹನ ಪರಿಶೀಲನೆ ಆರಂಭಿಸಿದಾಗ ಮೊದಲು ಮೀನು ಮತ್ತು ಐಸ್ ಗಡ್ಡೆ ಇದ್ದವು. ಮೀನಿನ ಟ್ರೇಗಳನ್ನು ಸರಿಸಿ ಪರಿಶೀಲಿಸಿದಾಗ ಮದ್ಯ ಸಾಗಿಸುತ್ತಿದ್ದ 350 ಬಾಕ್ಸ್‌ಗಳು ಪತ್ತೆಯಾಗಿವೆ. ಈ ವಾಹನವು ಉಡುಪಿಯಲ್ಲಿ ನೋಂದಣಿಯಾಗಿದೆ ಎಂದು ತಿಳಿಸಿದರು.
ಮದ್ಯದ ಬಾಟಲಿಗಳ ಮೇಲೂ ಮದ್ಯ ತಯಾರಿಕೆ ಸಂಸ್ಥೆ ಬಗ್ಗೆ ಉಲ್ಲೇಖವಿಲ್ಲ. ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಂಡಿದೆ.






