ಸಾಸ್ತಾನದಿಂದ ಬೈಕ್ ಕದ್ದು ಪರಾರಿ ಆಗುತ್ತಿದ್ದಾಗ ತಲ್ಲೂರಿನಲ್ಲಿ ಕಾರಿಗೆ ಡಿಕ್ಕಿ:ಪ್ರಕರಣ ದಾಖಲು
Views: 108
ಕನ್ನಡ ಕರಾವಳಿ ಸುದ್ದಿ: ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಹೋದ ವ್ಯಕ್ತಿಯ ಬೈಕ್ ಕಳವು ಮಾಡಿ ಅದರಲ್ಲೇ ಪರಾರಿಯಾಗುವ ವೇಳೆ ಕಾರಿಗೆ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಸಂಭವಿಸಿದೆ.
ಪಾಂಡೇಶ್ವರ ನಾಗರಾಜ ಪೂಜಾರಿ (48) ಅವರು ಕೆಲವು ದಿನಗಳ ಹಿಂದೆ ಸಾಸ್ತಾನ ಗೋಳಿಗರಡಿ ದೇವಸ್ಥಾನದ ಬಳಿ ಬೈಕ್ ನಿಲ್ಲಿಸಿ, ಕೀಯನ್ನು ಟ್ಯಾಂಕ್ ಕವರ್‌ನಲ್ಲಿ ಇಟ್ಟು ಪೂಜೆ ಸಲ್ಲಿಸಲು ಗರಡಿಯೊಳಗೆ ತೆರಳಿದ್ದರು. ಬಳಿಕ ಹೊರ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಕೂಡಲೇ ಸುತ್ತ ಮುತ್ತ ಹುಡುಕಾಡಿದರೂ ಬೈಕ್ ಪತ್ತೆಯಾಗಿರಲಿಲ್ಲ.
ಅದೇ ದಿನ ನಾಗರಾಜ ಅವರಿಗೆ ಈ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಿಂದ ಕರೆ ಬಂದಿದ್ದು ಬೈಕ್‌ನ್ನು – ಮಾರುತಿ ಎಂಬಾತ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕುಂದಾಪುರದ ತಲ್ಲೂರು ಸಮೀಪ ಕಾರಿಗೆ. ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು.
ಅಪಘಾತದ ವಿಚಾರ ತಿಳಿದ ನಾಗರಾಜ ಅವರಿಗೆ ತಮ್ಮ ಬೈಕ್ ಪತ್ತೆಯಾಗಿರುವುದು ತಿಳಿದುಬಂದಿತ್ತು. ಹೀಗಾಗಿ ಬೈಕ್ ಕಳವಾದ ಬಗ್ಗೆ ಪ್ರತ್ಯೇಕ ದೂರು ನೀಡಿರಲಿಲ್ಲ ಇದೀಗ ಪ್ರಕರಣದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.






