3ನೇ ‘ಸೆನ್ಯಾರ್’ ಚಂಡಮಾರುತದ ಭೀತಿ: ಬಿರುಗಾಳಿ ಸಹಿತ ಭಾರೀ ಮಳೆ ಮುನ್ಸೂಚನೆ, ಕರಾವಳಿ ಭಾಗದಲ್ಲಿ ಹೈ-ಅಲರ್ಟ್
Views: 12
ಕನ್ನಡ ಕರಾವಳಿ ಸುದ್ದಿ: ‘ಸೆನ್ಯಾರ್’ ಎಂದು ಕರೆಯಲಾಗುತ್ತಿರುವ ಹೊಸ ಚಂಡಮಾರುತ, ನವೆಂಬರ್ 16ರ ಸಂಜೆಯ ವೇಳೆಗೆ ಉತ್ತರ ಆಂಧ್ರ ಮತ್ತು ದಕ್ಷಿಣ ಒಡಿಶಾ ಕರಾವಳಿಗೆ ಅಪ್ಪಳಿಸುವ ಭೀತಿ ಎದುರಾಗಿದೆ. ಇದರ ಪರಿಣಾಮವಾಗಿ ಆಂಧ್ರ, ಒಡಿಶಾ ಸೇರಿದಂತೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲೂ ಗಂಟೆಗೆ 60 ಕಿಲೋಮೀಟರ್ ವೇಗದ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪ ಸೃಷ್ಟಿಯಾಗಿರುವ ವಾಯುಭಾರ ಕುಸಿತವು ವೇಗವಾಗಿ ಬಲಗೊಳ್ಳುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ನವೆಂಬರ್ 15ರ ವೇಳೆಗೆ ಇದು ಅಧಿಕೃತವಾಗಿ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ. ಬಂಗಾಳಕೊಲ್ಲಿಯಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಈ ಹವಾಮಾನ ವೈಪರೀತ್ಯವು ಸಮುದ್ರದಲ್ಲಿ ಬೃಹತ್ ಅಲೆಗಳನ್ನು ಸೃಷ್ಟಿಸುತ್ತಿದ್ದು, ಕರಾವಳಿ ಭಾಗದಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ.
ಚಂಡಮಾರುತ ಅಪ್ಪಳಿಸಲಿರುವ ಆಂಧ್ರ ಮತ್ತು ಒಡಿಶಾ ರಾಜ್ಯಗಳಲ್ಲಿ ಯುದ್ಧೋಪಾದಿಯ ಸಿದ್ಧತೆಗಳು ಆರಂಭವಾಗಿವೆ. ಒಡಿಶಾದ ಕಟಕ್, ಬಾಲಾಸೋರ್ ಹಾಗೂ ಆಂಧ್ರದ ಕರಾವಳಿ ಭಾಗಗಳಲ್ಲಿ ನವೆಂಬರ್ 16 ರಿಂದ ಭಾರೀ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಜಿಲ್ಲಾಡಳಿತಗಳು ಕರಾವಳಿ ಗ್ರಾಮಗಳ ಮೇಲೆ ನಿಗಾ ಇರಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲು ಸಿದ್ಧತೆ ನಡೆಸಿವೆ. ಆದರೆ ಕಟಾವಿಗೆ ಬಂದಿರುವ ಬೆಳೆಗಳು ಮಳೆ ಪಾಲಾಗುವ ಭೀತಿ ಅನ್ನದಾತರನ್ನು ಕಂಗಾಲು ಮಾಡಿದೆ.
ಈ ಚಂಡಮಾರುತದ ನೇರ ಹೊಡೆತ ಆಂಧ್ರ-ಒಡಿಶಾಗೆ ಬಿದ್ದರೂ, ಇದರ ಬಾಲದ ಎಫೆಕ್ಟ್ ಇಡೀ ದಕ್ಷಿಣ ಭಾರತವನ್ನು ಆವರಿಸಲಿದೆ. ಕೇರಳದ ತಿರುವನಂತಪುರಂನಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದ್ದು, ಮುಂದಿನ 3 ದಿನ ಭಾರಿ ಮಳೆಯಾಗಲಿದೆ. ಅತ್ತ ತಮಿಳುನಾಡು ಮತ್ತು ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಮೋಡ ಕವಿದ ವಾತಾವರಣವಿದ್ದು, ನವೆಂಬರ್ 16ರ ಆಸುಪಾಸಿನಲ್ಲಿ ಮಳೆಯ ಚಟುವಟಿಕೆಗಳು ಗರಿಗೆದರಲಿವೆ.
ಒಟ್ಟಿನಲ್ಲಿ, ಬಂಗಾಳಕೊಲ್ಲಿಯ ಆಳ ಸಮುದ್ರದಲ್ಲಿ ಸೃಷ್ಟಿಯಾಗುತ್ತಿರುವ ಈ ಮೂರನೇ ಚಂಡಮಾರುತ ಪೂರ್ವ ಕರಾವಳಿ ಮತ್ತು ದಕ್ಷಿಣ ಭಾರತದ ನಿದ್ದೆಗೆಡಿಸಿದೆ. ನವೆಂಬರ್ 16ರ ಸಂಜೆ ಆಂಧ್ರ ಮತ್ತು ಒಡಿಶಾ ನಡುವೆ ಇದು ಅಪ್ಪಳಿಸುವಾಗ ಯಾವ ರೀತಿಯ ವಿನಾಶ ಸೃಷ್ಟಿಸಲಿದೆ ಎಂಬ ಭೀತಿ ಶುರುವಾಗಿದೆ. ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯ ಬೆನ್ನಲ್ಲೇ ಆಡಳಿತ ಯಂತ್ರಗಳು ಕಟ್ಟೆಚ್ಚರ ವಹಿಸಿದ್ದು, ಕಡಲ ತೀರದ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ.






