ಇತರೆ

ಕೋಟದಲ್ಲಿ ಭೀಕರ ಅಪಘಾತ: ಕಾರು ಚಾಲಕ ಬೀಜಾಡಿಯ ಪ್ರದೀಪ್ ಕಾಂಚನ್ ಚಿಕಿತ್ಸೆಗೆ ಸ್ಪಂಧಿಸದೆ ಸಾವು 

Views: 163

ಕನ್ನಡ ಕರಾವಳಿ ಸುದ್ದಿ: ರಾಷ್ಟ್ರೀಯ ಹೆದ್ದಾರಿ 66ರ ಕೋಟದಲ್ಲಿ ನಡೆದ ಕಾರು ಮತ್ತು ಸೈಕಲ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕಾರು ಚಾಲಕ ಪ್ರದೀಪ್ ಕಾಂಚನ್ (26) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ಸೈಕಲ್ ಸವಾರ, ಆರ್‌ಎಸ್‌ಎಸ್ ಮುಖಂಡ ಗುರುದಾಸ ಶೆಣೈ ಅವರು ಸೋಮವಾರ ಸ್ಥಳದಲ್ಲೇ ಮೃತಪಟ್ಟಿದ್ದರು.

ಬೀಜಾಡಿ ನಿವಾಸಿ ಪ್ರದೀಪ್ ಕಾಂಚನ್ ಅವರು ಅ.26ರಂದು ಸೋಮವಾರ ಬೆಳಿಗ್ಗೆ ಉಡುಪಿಯಿಂದ ಕುಂದಾಪುರದ ಕಡೆಗೆ ಹೋಂಡಾ ಸಿಟಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕೋಟ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ರಸ್ತೆಯ ಅಂಚಿಗೆ ಬರುತ್ತಿದ್ದ ಗುರುದಾಸ ಶೆಣೈ ಅವರ ಸೈಕಲ್‌ಗೆ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ಕಾರು ರಸ್ತೆಯ ಎಡಬದಿಗೆ ಚಲಿಸಿ ಸೈಕಲ್‌ಗೆ ಡಿಕ್ಕಿ ಹೊಡೆದ ಬಳಿಕ ರಸ್ತೆ ಬದಿಯಲ್ಲಿದ್ದ ಗ್ರಿಲ್ಸ್‌ಗೂ ಅಪ್ಪಳಿಸಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಡಿಕ್ಕಿಯ ರಭಸಕ್ಕೆ ಗುರುದಾಸ ಶೆಣೈ ರಸ್ತೆಗೆ ಎಸೆಯಲ್ಪಟ್ಟಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು.

ಅಪಘಾತದಲ್ಲಿ ಕಾರು ಚಾಲಕ ಪ್ರದೀಪ್ ಕಾಂಚನ್ ಅವರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಮುಂದುವರಿದಿದ್ದರೂ ಫಲಕಾರಿಯಾಗದೆ ಮಂಗಳವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ.

ಮೃತ ಪ್ರದೀಪ್ ಕಾಂಚನ್ ಅವರು ಉತ್ತಮ ಕ್ರಿಕೆಟ್ ಆಟಗಾರರಾಗಿದ್ದರು. ಅವಿವಾಹಿತರಾಗಿದ್ದ ಅವರು ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!