ಕಾರು- ಎಲೆಕ್ಟ್ರಿಕ್ ಬೈಕ್ ನಡುವೆ ಭೀಕರ ಅಪಘಾತ: ನವದಂಪತಿ ಸಾವು
Views: 46
ಕನ್ನಡ ಕರಾವಳಿ ಸುದ್ದಿ: ಇಕೋ ಕಾರು ಹಾಗೂ ಎಲೆಕ್ಟ್ರಿಕ್ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನವದಂಪತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ – ಬೆಂಗಳೂರು ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಚಿಂತಾಮಣಿ ನಗರದ ಎಂ.ಜಿ. ರಸ್ತೆಯ ಶ್ರೀನಿವಾಸ್ ಜ್ಯುವೆಲ್ಸ್ ಬಳಿಯ ನಿವಾಸಿಗಳಾದ ಷನ್ಮುಖ (27) ಹಾಗೂ ಅವರ ಪತ್ನಿ ಮಿಥುಲ (24) ಎಂದು ಗುರುತಿಸಲಾಗಿದೆ.
ಕೆಲವೇ ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ, ಇದೀಗ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವುದು ಕುಟುಂಬಸ್ಥರಿಗೆ ಆಘಾತ ತಂದಿದೆ. ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ನವದಂಪತಿ ಎಲೆಕ್ಟ್ರಿಕ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಎದುರಿನಿಂದ ಬಂದ ಇಕೋ ಕಾರು ನಡುವೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಹಾಗೂ ಬೈಕ್ ಎರಡೂ ತೀವ್ರವಾಗಿ ಜಖಂಗೊಂಡಿವೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಷನ್ಮುಖ ಹಾಗೂ ಮಿಥುಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದೇ ಅಪಘಾತದಲ್ಲಿ ಇಕೋ ಕಾರಿನಲ್ಲಿದ್ದ ಸೂರಜ್, ಎಂ.ಎಲ್.ಕುಮಾರ್ ಹಾಗೂ ಅತುಲಾ ಎಂಬುವವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






