ಕರಾವಳಿ

ಸುರತ್ಕಲ್ ಎಂಆರ್‌ಪಿಎಲ್ ಪ್ರದೇಶದಲ್ಲಿ ಭಾರಿ ಸ್ಫೋಟದ ಸದ್ದು! ಆತಂಕದ ವಾತಾವರಣ ನಿರ್ಮಾಣ

Views: 64

ಕನ್ನಡ ಕರಾವಳಿ ಸುದ್ದಿ: ಮಂಗಳೂರು ನಗರದ ಹೊರವಲಯದ MRPL ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿರುವ ಘಟನೆ ವರದಿಯಾಗಿದೆ. ಸ್ಫೋಟದ ತೀವ್ರತೆಗೆ ಜೋಕಟ್ಟೆ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಕಂಪಿಸಿದ್ದು, ಕೆಲವು ಮನೆಗಳ ಬಾಗಿಲು ಹಾಗೂ ಕಿಟಕಿಗಳಿಗೆ ಹಾನಿಯಾಗಿದೆ ಎನ್ನಲಾಗಿದೆ.

ಸ್ಫೋಟದ ಬಳಿಕ MRPL ಪ್ರದೇಶದ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸಿಎಚ್‌ಟಿ ಘಟಕ (ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್ ಯೂನಿಟ್) ಅಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಬಳಿಕ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯನ್ನು ಈಗ ನಿಯಂತ್ರಣಕ್ಕೆ ತರಲಾಗಿದೆ.

ಪ್ಲಾಂಟ್‌ನಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಾಯಗಳಾಗಿವೆ. ಪ್ಲಾಂಟ್‌ನಲ್ಲಿದ್ದ ರಾಜೇಶ್ ಬ್ಯಾಪ್ಟಿಸ್ಟ್ ಎಂಬ ಓರ್ವ ವ್ಯಕ್ತಿಗೆ ಶೇಕಡಾ 35 ರಷ್ಟು ಸುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಐಸಿಯುನಲ್ಲಿದ್ದಾರೆ.

ಪಕ್ಕದ ಕಚೇರಿಯಲ್ಲಿದ್ದ ಇನ್ನುಳಿದ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಮತ್ತು ತಪಾಸಣೆ ಪಡೆದುಕೊಂಡಿದ್ದಾರೆ ಎಂದು ನಗರ ಪೊಲೀಸ್ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ದರ್ಶನ್, ಜಿ.ಪಂ ಸಿಇಒ ನರ್ವಾಡೆ ವಿನಾಯಕ ಕಾರ್ಭಾರಿ ಸ್ಥಳದಲ್ಲಿದ್ದಾರೆ. ಹೆಚ್ಚು ಆತಂಕ ಪಡುವಂತಹದ್ದೇನೂ ಇಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

Related Articles

Back to top button
error: Content is protected !!