ಖಾಲಿ ಸೈಟ್ ಕ್ಲೀನಿಂಗ್ ವೇಳೆ ಮಹಿಳೆಯ ಮೃತದೇಹ ಪತ್ತೆ: ಪ್ರೀತಿಸಿದ ಪತ್ನಿಯನ್ನೇ ಹತ್ಯೆಗೈದಿದ್ದ ಪತಿ ಅರೆಸ್ಟ್
Views: 41
ಕನ್ನಡ ಕರಾವಳಿ ಸುದ್ದಿ: ಖಾಲಿ ಸೈಟ್ ಗಳನ್ನು ಕ್ಲೀನ್ ಮಾಡುವಂತೆ ಜಿಬಿಎ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ ಖಾಲಿ ಇದ್ದ ಸೈಟ್’ವೊಂದರಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ.
ಸುಮಾರು ಒಂದು ತಿಂಗಳ ಹಿಂದೆ ನಡೆದಿದ್ದ ಕೊಲೆ ಯಾರಿಗೂ ತಿಳಿಯದೇ ಮರೆಮಾಚಿದ್ದ ಸತ್ಯ ಇದೀಗ ಬಯಲಿಗೆ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಇವರದ್ದು, ದಂಪತಿ ನಡುವೆ ಹಣದ ವಿಚಾರವಾಗಿ ನಡೆಯುತ್ತಿದ್ದ ಜಗಳವೇ ಕೊಲೆಗೆ ಕಾರಣವಾಗಿದ್ದು, ಪತಿ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅನುಸೂಯ (28) ಕೊಲೆಯಾದ ಮಹಿಳೆ. ಸಾಗರ್ ಚಂದ್ರ ರಾವತ್ (32) ಹತ್ಯೆಗೈದ ಆರೋಪಿ. ಒಡಿಶಾ ಮೂಲದ ಈ ದಂಪತಿ ಬೆಂಗಳೂರಿನ ಪ್ರತ್ಯೇಕ ಹೋಟೆಲ್’ಗಳಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿ ಮಧ್ಯೆ ಹಣಕಾಸಿನ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು. ಆ. 11ರಂದು ಮತ್ತೆ ಜಗಳ ಶುರುವಾಗಿದ್ದು, ಗಲಾಟೆ ವಿಕೋಪಕ್ಕೆ ತಿರುಗಿ, ಸಾಗರ್ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.ಮೂರು ದಿನ ಶವದ ಜೊತೆಯೇ ಮನೆಯಲ್ಲಿದ್ದ ಆತ ಬಳಿಕ ಹಾಸಿಗೆಯಲ್ಲಿ ಸುತ್ತಿ ಮೃತದೇಹವನ್ನು ಖಾಲಿ ಸೈಟ್ನಲ್ಲಿ ಎಸೆದಿದ್ದ. ಯಾರಿಗೂ ಅನುಮಾನ ಬಾರದಂತೆ ಪ್ರತಿದಿನ ಅದೇ ಜಾಗದ ಬಳಿ ಬಂದು ಶವ ಪತ್ತೆಯಾಗಿದೆಯೇ ಎಂದು ಗಮನಿಸಿ ಹೋಗುತ್ತಿದ್ದ.
ಜಿಬಿಎ ಖಾಲಿ ಸೈಟ್ಗಳನ್ನು ಸ್ವಚ್ಛಗೊಳಿಸುವಂತೆ ನೋಟಿಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ, ಸೈಟ್ ಮಾಲೀಕರು ಕಾರ್ಮಿಕರನ್ನು ಕಳುಹಿಸಿ ಕ್ಲೀನ್ ಮಾಡಿಸಲು ಮುಂದಾಗಿದ್ದರು. ಈ ವೇಳೆ ಕೊಳೆತ ಸ್ಥಿತಿಯಲ್ಲಿದ್ದ ನಾಯಿಗಳು ಕಚ್ಚಿ ತಿಂದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ತಕ್ಷಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಶವದ ಮೇಲಿದ್ದ ಮಾಲ್ ಒಂದರ ಬಟ್ಟೆ ಟ್ಯಾಗ್ ಸಿಕ್ಕಿದ್ದು, ಅದರ ಬಿಲ್ ಆಧಾರದ ಮೇಲೆ ತನಿಖೆ ನಡೆಸಿ ಮೃತರ ಗುರುತು ಪತ್ತೆಹಚ್ಚಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.






