ಇತರೆ

ನೇಪಾಳದಲ್ಲಿ ಪ್ರವಾಹ: 469 ಜನರು ಸಾವು, 1400 ಜನರು ಕಾಣೆ ; 84 ಭಾರತೀಯರ ರಕ್ಷಣೆ

Views: 20

ಕನ್ನಡ ಕರಾವಳಿ ಸುದ್ದಿ: ನೇಪಾಳದ ರಸುವಾ ಜಿಲ್ಲೆಯ ಭೋಟೆ ಕೋಶಿ ಪ್ರವಾಹದಲ್ಲಿ ಸಿಲುಕಿ ಮೃತಪಟ್ಟವರ ಸಂಖ್ಯೆ 469ಕ್ಕೆ ಏರಿಕೆ ಆಗಿದೆ. ಸಾವಿರಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಮತ್ತು ನಿರ್ವಹಣಾ ಪ್ರಾಧಿಕಾರ ಗುರುವಾರ ಬಿಡುಗಡೆ ಮಾಡಿದ ತನ್ನ ಇತ್ತೀಚಿನ ಸ್ಥಿತಿ ವರದಿಯಲ್ಲಿ ತಿಳಿಸಿದೆ.

ಜಿಲ್ಲಾ ಆಡಳಿತ ಕಚೇರಿ ಮತ್ತು ಜಿಲ್ಲಾ ಮತ್ತು ರಾಷ್ಟ್ರೀಯ ತುರ್ತು ಕಾರ್ಯಾಚರಣೆ ಕೇಂದ್ರಗಳಿಂದ ಪಡೆದ ವಿವರಗಳ ಆಧಾರದ ಮೇಲೆ ಈ ಅಂಕಿ- ಅಂಶಗಳನ್ನು ಸಂಗ್ರಹಿಸಲಾಗಿದೆ. ಗುರುವಾರ X ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರವಾಹದಿಂದ ಆಗಿರುವ ಅನಾಹುತಗಳ ಬಗ್ಗೆ ತನ್ನ ಆರನೇ ವರದಿಯನ್ನು ಬಿಡುಗಡೆ ಮಾಡಿದೆ.

ಕಾಣೆಯಾದ ಸಾವಿರಾರು ಜನರಲ್ಲಿ 28 ನೇಪಾಳ ಪೊಲೀಸ್ ಸಿಬ್ಬಂದಿ, 45 ನೇಪಾಳ ಸೇನಾ ಸಿಬ್ಬಂದಿ, 13 ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿ, 15 ಕಸ್ಟಮ್ಸ್ ಕಚೇರಿ ಸಿಬ್ಬಂದಿ ಮತ್ತು ನಾಲ್ವರು ವಲಸೆ ಕಚೇರಿ ಸಿಬ್ಬಂದಿ ಸೇರಿದ್ದಾರೆ ಎಂದು ಎನ್ ಡಿಆರ್ ಆರ್ ಎಂಎ ತಿಳಿಸಿದೆ. ಕಾಣೆಯಾದವರಲ್ಲಿ 517 ವಿದೇಶಿ ಪ್ರಜೆಗಳು ಮತ್ತು ನೇಪಾಳಕ್ಕೆ ಭೇಟಿ ನೀಡಲು ಬಂದಿದ್ದ ವಿದೇಶಗಳಲ್ಲಿ ವಾಸಿಸುವ 127 ನೇಪಾಳಿ ನಾಗರಿಕರು ಸೇರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಪ್ರವಾಹದಲ್ಲಿ 73 ಜನರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

7,250 ನೇಪಾಳ ಪೊಲೀಸ್ ಸಿಬ್ಬಂದಿ, 4,200 ನೇಪಾಳ ಸೇನಾ ಸಿಬ್ಬಂದಿ ಮತ್ತು 1,845 ಸಶಸ್ತ್ರ ಪೊಲೀಸ್ ಪಡೆ ನೇಪಾಳ ಸಿಬ್ಬಂದಿ ಸೇರಿದಂತೆ 13,295 ಭದ್ರತಾ ಸಿಬ್ಬಂದಿಯನ್ನು ಶೋಧ, ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ನಿಯೋಜಿಸಲಾಗಿದೆ. ನೇಪಾಳ ಸೇನೆಯ ಆರು ಮತ್ತು ಖಾಸಗಿ ವಲಯದ ಒಂಬತ್ತು ಸೇರಿದಂತೆ ಹದಿನೈದು ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

ಹೆಲಿಕಾಪ್ಟರ್ ಕಾರ್ಯಾಚರಣೆಗಳ ಮೂಲಕ ಸುಮಾರು 1,976 ಜನರನ್ನು ರಕ್ಷಿಸಲಾಗಿದೆ ಎಂದು NDRRMA ತಿಳಿಸಿದೆ. ಶೋಧ ಮತ್ತು ರಕ್ಷಣಾ, ತುರ್ತು ಆರೋಗ್ಯ ಸೇವೆಗಳು, ಸಂವಹನ, ವಿದ್ಯುತ್ ಪುನಃಸ್ಥಾಪನೆ, ರಸ್ತೆ ಜಾಲ ಕಾರ್ಯಾಚರಣೆ, ಪರಿಹಾರ ವಿತರಣೆ, ಅಂತಾರಾಷ್ಟ್ರೀಯ ನೆರವು ಮತ್ತು ಮಾಹಿತಿ ನಿರ್ವಹಣೆಯನ್ನು ಸುಗಮಗೊಳಿಸಲು 12 ವಿಷಯಾಧಾರಿತ ತುರ್ತು ಸಮನ್ವಯ ತಂಡಗಳನ್ನು ರಚಿಸಲಾಗಿದೆ ಮತ್ತು ಸಜ್ಜುಗೊಳಿಸಲಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ರಸ್ತೆ ತೆರವು ಕಾರ್ಯಾಚರಣೆಗಳು ಸಹ ಭರದಿಂದ ಸಾಗಿವೆ. ದೇವಿಘಾಟ್‌ನಲ್ಲಿನ ರಸ್ತೆ ಅಡಚಣೆಗಳನ್ನು ತೆರವುಗೊಳಿಸಲಾಗಿದೆ ಮತ್ತು ಗಾಲ್ಚಿ-ಬಿದೂರ್-ತ್ರಿಶೂಲಿ ಮತ್ತು ಬೈರೇನಿ-ಮುಗ್ಲಿನ್ ರಸ್ತೆ ವಿಭಾಗಗಳಲ್ಲಿನ ಅಡೆತಡೆಗಳನ್ನು ತೆರವುಗೊಳಿಸಲು ಉಪಕರಣಗಳನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.

ಬುಧವಾರ ಬೆಳಗ್ಗೆ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ನೇಪಾಳವು ಭಾರಿ ಸಂಕಷ್ಟದಲ್ಲಿದೆ. ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಭಾರಿ ಪ್ರಮಾಣದ ನೀರಿನೊಂದಿಗೆ ಕೆಸರು ಮತ್ತು ಬಂಡೆಗಳ ಪ್ರಬಲ ಅಲೆಯೇ ಸೃಷ್ಟಿಯಾಗಿತ್ತು. ಪ್ರವಾಹ ಪೀಡಿತ ನುವಾಕೋಟ್‌ಗೆ ನೇಪಾಳದ ಪ್ರಧಾನಿ ಬಾಲೆನ್ ಶಾ ಭೇಟಿ ನೀಡಿ ಪರಿಸ್ಥಿತಿಯ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಪರಿಸ್ಥಿತಿ ಭಯಂಕರವಾಗಿದ್ದು ಸವಾಲಿನಿಂದ ಕೂಡಿದೆ. ಎಲ್ಲವನ್ನು ಸಹಜ ಸ್ಥಿತಿಗೆ ತರುವಂತೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

 

Related Articles

Back to top button
error: Content is protected !!