ತನ್ನ ಮನೆಯಲ್ಲಿಯೇ ಕಳ್ಳತನಗೈದು ಪ್ರೇಯಸಿಗೆ ಬೆಲೆಬಾಳುವ ಐಫೋನ್ ಗಿಫ್ಟ್ ನೀಡಿದ ಮುದ್ದಿನ ಮಗ!
Views: 61
ಕನ್ನಡ ಕರಾವಳಿ ಸುದ್ದಿ: ಹೆತ್ತವರು ಮನೆಯಿಂದ ಹೊರಗೆ ಹೋಗಿದ್ದಾಗ ಸ್ವಂತ ಮಗನೇ ಸುಮಾರು 50 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕಳ್ಳತನಗೈದು ಕದ್ದ ಹಣದ ಒಂದು ಭಾಗವನ್ನು ತನ್ನ ಗರ್ಲ್ ಫ್ರೆಂಡ್ ಗಾಗಿ ಖರ್ಚು ಮಾಡಿದ ಘಟನೆಯೊಂದು ಗುವಾಹಟಿಯಲ್ಲಿ ನಡೆದಿದೆ.
ಯಶ್ ಧನುಕಾ ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಪೋಷಕರು ವಾಪಸ್ ಬಂದಾಗ ನಗದು, ಬೆಲೆಬಾಳುವ ವಸ್ತುಗಳು ನಾಪತ್ತೆಯಾಗಿರುವುದು ಗೊತ್ತಾಗಿದೆ. ಆರೋಪಿಯ ತಂದೆ ನೀಡಿದ ದೂರಿನಲ್ಲಿ ಆತನ ಸ್ನೇಹಿತರಾದ ಜಿತೇಂದ್ರ ಸೋಮಾನಿ, ರೋಹಿತ್ ಪ್ರಸಾದ್ ಮತ್ತು ಪಬಾಲಿ ದತ್ತಾ ಎಂಬವರ ಹೆಸರನ್ನೂ ಉಲ್ಲೇಖಿಸಿ ಇವರ ಕೈವಾಡದ ಶಂಕೆ ಇರುವುದಾಗಿ ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ವಿಚಾರಿಸಿದಾಗ ಸ್ನೇಹಿತರೇ ಕಳ್ಳತನಕ್ಕೆ ಪ್ರಚೋದನೆ ನೀಡಿದ್ರು. ಕದ್ದ ಹಣದಲ್ಲಿ ಪಬಾಲಿ ದತ್ತಾ ಹೆಸರಿನ ತನ್ನ ಗರ್ಲ್‌ಫ್ರೆಂಡ್‌ಗಾಗಿ ಸುಮಾರು 1.5 ಲಕ್ಷ ಮೌಲ್ಯದ ಐಫೋನ್ ಉಡುಗೊರೆಯಾಗಿ ನೀಡಿರುವುದು ಹಾಗೂ ನಗದು ಹಣ ನೀಡಿರುವುದು ನಿಜ ಎಂದು ತಿಳಿಸಿದ್ದಾನೆ. ಈ ಕೃತ್ಯ ಎಸಗಿದ ಬಗ್ಗೆ ನನಗೆ ನಿಜವಾಗಿಯೂ ಪಶ್ಚಾತ್ತಾಪವಿದೆ ಎಂದು ಹೇಳಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.






