ಆರೋಗ್ಯ

ಕರಾವಳಿ ಪದ್ಮಶಾಲಿ ಮೂಲ ಕ್ಷೇತ್ರ ಬಾರ್ಕೂರು ದೇವಸ್ಥಾನದಲ್ಲಿ “ಆಷಾಢ ಸಂಭ್ರಮ” 63 ಮಹಿಳೆಯರಿಂದ 74 ಕ್ಕೂ ಹೆಚ್ಚು ಭಕ್ಷ್ಯ ತಯಾರಿಸಿ ಸಾಮೂಹಿಕ ಸವಿಯೂಟ

Views: 44

ಕನ್ನಡ ಕರಾವಳಿ ಸುದ್ದಿ: ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಆಶಯದಲ್ಲಿ ಅಗಸ್ಟ್ 9 ರಂದು ಆಷಾಢ ಸಂಭ್ರಮ ವಿಜೃಂಭಣೆಯಿಂದ ನಡೆಯಿತು.

ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾರ್ಕೂರು ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಅವರು ಮಾತನಾಡಿ, “ನಮ್ಮ ಹಿರಿಯರು ಪರಿಸರದಲ್ಲಿ ದೊರೆಯುವ ಸೊಪ್ಪು, ಗಡ್ಡೆ ಗೆಣಸುಗಳನ್ನು ಬಳಸಿ ಅರೋಗ್ಯಯುತವಾಗಿ ಬದುಕಿದ್ದರು. ಇಂದು ಪಾಶ್ಚಾತ್ಯ ತಿನಿಸಿಗೆ ಮಾರುಹೋಗಿ ವಿವಿಧ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಆದರೆ ಕರಾವಳಿ ಪ್ರದೇಶ ವಿಭಿನ್ನ ಶೈಲಿಯ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಆಹಾರ ಪದ್ಧತಿಗೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಮಾದರಿಯಾಗಲಿ” ಎಂದರು.

ವೇದಿಕೆಯಲ್ಲಿ ನಾರಾಯಣ ಶೆಟ್ಟಿಗಾರ ಸುರತ್ಕಲ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಡಾ.ಜಯರಾಮ ಶೆಟ್ಟಿಗಾರ್ ವೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿಗಾ‌ರ್ ಉಡುಪಿ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸಾಸ್ತಾನ, ಸಂಘಟನಾ ಸಮಿತಿಯ ಅಧ್ಯಕ್ಷ ಭಾಸ್ಕ‌ರ್ ಶೆಟ್ಟಿಗಾರ ಸಂತೆಕಟ್ಟೆ, ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಸುಧಾಕರ ವಕ್ವಾಡಿ,ಸಹ ಸಹಮೊಕ್ತೇಸರರು, ಗುರಿಕಾರರು ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

63 ಮಹಿಳೆಯರಿಂದ 74 ಭಕ್ಷ್ಯ ತಯಾರಿಸಿ ಸಾಮೂಹಿಕ ಸವಿಯೂಟ

ಮಿಡಿ ಉಪ್ಪಿನಕಾಯಿ, ಕೆಸುವಿನ ಚಟ್ನಿ, ಕೆತ್ತೆ ಉಪ್ಪಿನಕಾಯಿ, ಹುರುಳಿ ಚಟ್ನಿ, ಶೇಂಗಾ ಚಟ್ನಿ, ಕೆಸದ ಚಟ್ನಿ, ಉಪ್ಪಿನ ಹುಡಿ, ಕಣಲೆ ಉಪ್ಪಿನಕಾಯಿ, ಜೀ ಗುಜ್ಜೆ ಗಸಿ, ಚಗಟೆ ಸೊಪ್ಪು- ಹಲಸಿನ ಬೀಜದ ಪಲ್ಯ, ಮಾವಿನ ಹಣ್ಣಿನ ಪಲ್ಯ, ಕೆಸುವಿನ ಚಟ್ನಿ, ಕರಿಬೇವಿನ ಚಟ್ನಿ, ಹಲಸಿನ ಬೀಜದ ಹೂಡೆ, ನುಗ್ಗಿ ಸೊಪ್ಪಿನ ವಡೆ, ಕೆಸುವಿನ ಪತ್ರೊಡೆ, ಮಾವಿನಕಾಯಿ ಚಟ್ನಿ, ಹಲಸಿನ ಹಣ್ಣಿನ ಮುಳ್ಕ, ಮೆಂತೆ ದೋಸೆ, ಕ್ಯಾನೆ ಮುದ್ದೆ, ಅತ್ತರಸ, ಕುಚ್ಚಿಗೆ ಅಕ್ಕಿ ಉಂಡೆ, ಉಪ್ಪಡ ಪಚ್ಚಿರ್, ಕೊಚ್ಚಿಗೆ ಅಕ್ಕಿ ಉಂಡೆ, ಅಪ್ಪದ ಹಿಟ್ಟು, ಹೆಸರುಬೇಳೆ ಕಿಚ್ಡಿ, ಅಕ್ಕಿ ಹುಡಿ, ಅಕ್ಕಿ ರವೆ ಉಂಡೆ, ಬಾಳೆಹಣ್ಣಿನ ಮುಳ್ಕ, ಪುನರ್ಪುಳಿ ಪಾನಕ, ಹಲಸಿನ ಹಣ್ಣಿನ ಪಾಯಸ, ಶಾವಿಗೆ ಮತ್ತು ಹಾಲು, ಹಂಗಾರ ಎಲೆ ಕಡಬು, ಕೊಬ್ಬರಿ ಉಪ್ಪಿನ ಹುಡಿ, ಮುಳ್ಳು ಸೌತೆ ಕಡಬು, ಹಲಸಿನ ಹಣ್ಣಿನ ಕಡುಬು, ಮಾವಿನಹಣ್ಣಿನ ಕಡಬು, ಕೆಸುವಿನ ಅರೆಪಡ್ಡೆ, ಕೊಟ್ಟೆ ಕಡುಬು, ಮೆಂತೆಗಂಜಿ, ಸುಖಿನುಂಡೆ, ಅಕ್ಕಿ ಉಂಡೆ, ಚಗಟೆ ಸೊಪ್ಪಿನ ಅಂಬಡೆ, ಅಣಬೆ ಗಸಿ, ಹುರುಳಿ ಸಾರು, ಹುರುಳಿ ಉಂಡೆ, ರಾಗಿ ಮಣ್ಣಿ, ಕಾರ- ಚೌ ಚೌ, ಮಾವಿನಹಣ್ಣಿನ ಸಾರು, ಹಲಸಿನ ಗುಂಜಿ ಚಟ್ನಿ, ಅರಸಿನ ಎಲೆ ಕಡಬು, ಕೆಸುವಿನ ಸೊಪ್ಪಿನ ಚಟ್ನಿ, ನರೋಳಿ ಸೊಪ್ಪಿನ ದೋಸೆ, ಚಗಟೆ ಸೊಪ್ಪಿನ ವಡೆ, ಕೋಸಂಬರಿ, ಕಣಲೆ ಹೆಸರು ಗಸಿ, ಹೆಸರುಕಾಳಿನ ವಡೆ, ಹೆಸರುಕಾಳಿನ ಚಟ್ನಿ, ಅರಸಿನ ಎಲೆ ಕಡುಬು, ಕೊಬ್ಬರಿ ಚಟ್ನಿ, ಕಾಳು ಮೆಣಸಿನ ಕಷಾಯ, ಕಣಲೆ ಪಲ್ಯ, ನುಗ್ಗೆಕಾಯಿ ಫ್ರೈ, ಅಕ್ಕಿ ಹಪ್ಪಳ, ಕಡಲೆ ಸಾಂಬಾರ್, ಸೆಕೆ ಅಡ್ಡೆ,  ಹಂಗಾರ ಎಲೆ ಹಿಟ್ಟು, ಬಾಳೆ ಹೂವು ಪಲ್ಯ, ನಿಪ್ಪಟ್ಟು, ಹಪ್ಪಳದ ಉಪ್ಪಿನ ಹುಡಿ,

ಈ ಸಂದರ್ಭದಲ್ಲಿ ಆಷಾಡಿ ಸಂಭ್ರಮದ ಹಾಡನ್ನು ಹಾಡಿ ಸಂಭ್ರಮಿಸಿ ನೆರೆದವರು ಹೆಜ್ಜೆ ಹಾಕಿದರು.

ಕೆಸುವಿನ ಚಟ್ನಿ, ನರೋಳಿ ಸೊಪ್ಪಿನ ದೋಸೆ ತಯಾರಿಸಿದ ಶ್ರೀಮತಿ ರತ್ನಾವತಿ ಶೆಟ್ಟಿಗಾರ ಶಾಸ್ತಾನ ಇವರು ಪ್ರಥಮ ಬಹುಮಾನ ಪಡೆದರು. ಕೆಸುವಿನ ಅರೆ ಪಡ್ಡೆ ತಯಾರಿಸಿದ ಶ್ರೀಮತಿ ನಯನ ಶಿವಪ್ರಸಾದ್ ದೊಡ್ಡನಗುಡ್ಡೆ ದ್ವಿತೀಯ ಬಹುಮಾನ, ಚಗಟೆ ಸೊಪ್ಪಿನ ಅಂಬಡೆ ತಯಾರಿಸಿದ ಶ್ರೀಮತಿ ಕವಿತಾ ಜಯರಾಮ ಶೆಟ್ಟಿಗಾರ ಸಂತೆಕಟ್ಟೆ ತೃತೀಯ ಬಹುಮಾನ ಪಡೆದರು. ಉಳಿದಂತೆ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

ವಿವಿಧ ಗ್ರಾಮೀಣ ಆಟಗಳು ಮತ್ತು ಸಾಂಸ್ಕೃತಿಕ ಆಹಾರೋತ್ಸವ ಕಾರ್ಯಕ್ರಮದಲ್ಲಿ 63 ಮನೆಯವರಿಂದ 74 ಭಕ್ಷ್ಯಗಳನ್ನು ತಯಾರಿಸಿ ಸಾಮೂಹಿಕ ಸವಿಯೂಟ ನಡೆಯಿತು.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶ್ರೀಮತಿ ಯಶೋಧ ಶ್ರೀನಿವಾಸ ಶೆಟ್ಟಿಗಾರ ಬಾರ್ಕೂರು ಬಹುಮಾನದ ಪ್ರಾಯೋಜಕರಾಗಿದ್ದರು.

ಯುವ ವೇದಿಕೆ ಅಧ್ಯಕ್ಷ ಸಂಜೀವ ಶೆಟ್ಟಿಗಾರ ಸ್ವಾಗತಿಸಿದರು. ನಾರಾಯಣ ಹಂದಾಡಿ, ಶ್ರೀಲತಾ ಪ್ರವೀಣ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

 

 

 

 

Related Articles

Back to top button
error: Content is protected !!