ಧರ್ಮಸ್ಥಳ ಗ್ರಾಮದಲ್ಲಿ ಹೆಣಗಳನ್ನು ಹೂಳಿರುವ ಪ್ರಕರಣ: ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ತನಿಖೆಗೆ ಒತ್ತಾಯ

Views: 238
ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ದೊಡ್ಡ ಸಂಖ್ಯೆಯ ಕೊಲೆ ಮತ್ತು ಹೆಣಗಳನ್ನು ಹೂಳಿರುವ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಣಗಳನ್ನು ಹೂಳಿರುವ ಪ್ರಕರಣದ ಸಾಕ್ಷಿಗೆ ರಾಜ್ಯ ಸರ್ಕಾರವು ತಕ್ಷಣವೇ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಪಿರ್ಯಾದುದಾರರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರವೂ ಸರಿಯಾಗಿ ತನಿಖೆ ಆಗುತ್ತಿಲ್ಲ. ಹೆಣಗಳನ್ನು ಎಲ್ಲಿ ಹೂಳಲಾಗಿದೆ ಎನ್ನುವುದನ್ನು ಖಾಲಿ ಹಾಳೆಯಲ್ಲಿ ಗುರುತು ಮಾಡಿಕೊಡು ಎಂದು ಪೊಲೀಸರು ಸಾಕ್ಷಿ ಪಿರ್ಯಾದಿ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಿದರು.
ಸಾಕ್ಷಿ ಪಿರ್ಯಾದಿಯೂ ತನ್ನ ವಕೀಲರೊಂದಿಗೆ ಸ್ಥಳಕ್ಕೆ ತೆರಳಿ ಕಳೆಬರ ತೋರಿಸುವುದಾಗಿ ನ್ಯಾಯಾಲಯ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪೊಲೀಸರು ಸ್ಥಳಕ್ಕೆ ತೆರಳಿಲ್ಲ. ಹೇಳಿಕೆ ದಾಖಲಿಸುವ ತನಿಖಾಧಿಕಾರಿ ಒತ್ತಡದ ಮೇಲೆ ಕೆಲಸ ಮಾಡುತ್ತಿದ್ದು, ಯಾರಿಗೋ ಕರೆ ಮಾಡಿ ಅವರು ಸೂಚಿಸಿದಂತೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಎಂದು ದೂರಿದರು.
ಈಗಿರುವ ತನಿಖಾ ತಂಡವನ್ನು ಬದಲಿಸಬೇಕು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಬೇಕು ಎಂದರು.
ಸಾಕ್ಷಿ ಪಿರ್ಯಾದುದಾರ ಮತ್ತು ಆತನ ವಕೀಲರಿಗೆ ಬೆದರಿಕೆ ಇದೆ. ತಕ್ಷಣವೇ ಭದ್ರತೆ ಒದಗಿಸಬೇಕು. ಇವರಿಗೆ ಏನಾದರೂ ಆದರೆ ರಾಜ್ಯದ ಗೃಹ ಸಚಿವರು ಹಾಗೂ ಪೊಲೀಸ್ ಮಹಾನಿರ್ದೇಶಕರೇ ಹೊಣೆಗಾರರಾಗುತ್ತಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಕೀಲ ಸಿ.ಎಸ್. ದ್ವಾರಕನಾಥ್ ಉಪಸ್ಥಿತರಿದ್ದರು.