ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯ

Views: 174
ಕನ್ನಡ ಕರಾವಳಿ ಸುದ್ದಿ: ದೇಶದಲ್ಲಿ ದ್ವಿಚಕ್ರ ವಾಹನಗಳೂ ಒಳಗೊಂಡ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವು, ಗಂಭೀರ ಗಾಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ದ್ವಿಚಕ್ರ ವಾಹನದ ಸವಾರ ಮತ್ತು ಹಿಂಬದಿಯ ಸವಾರನಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 1989ರ ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಪ್ರಮುಖ ಬದಲಾವಣೆ ತರಲು ಮುಂದಾಗಿದ್ದು ಸರ್ಕಾರದ ಅಧಿಕೃತ ಅಧಿಸೂಚನೆಯ ಪ್ರಕಾರ,ಹೊಸ ತಿದ್ದುಪಡಿ ನಿಯಮಗಳ ಅಂತಿಮ ಅಧಿಸೂಚನೆಯನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸಿದ ಮೂರು ತಿಂಗಳೊಳಗೆ ಈ ನಿಯಮ ಕಡ್ಡಾಯವಾಗಲಿದೆ.
ಜೊತೆಗೆ ದ್ವಿಚಕ್ರ ವಾಹನ ತಯಾರಕರು ವಾಹನ ಖರೀದಿಯ ಸಮಯದಲ್ಲಿ ಎರಡು ಹೆಲ್ಮೆಟ್‌ಗಳನ್ನು ಒದಗಿಸುವುದನ್ನು ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.
ಕಳೆದ ವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಕರಡು ಅಧಿಸೂಚನೆಯ ಪ್ರಕಾರ, ಹೊಸ ನಿಯಮದ ಪ್ರಕಾರ ಸವಾರರು ಮತ್ತು ಹಿಂಬದಿ ಪ್ರಯಾಣಿಕರಿಬ್ಬರಿಗೂ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಹೀಗಾಗಿ ಕಡ್ಡಾಯವಾಗಿ ಎರಡು ಹೆಲ್ಮೆಟ್ ಇರುವಂತೆ ನೋಡಿಕೊಳ್ಳಲು ಸೂಚಿಸಿದೆ
“ದ್ವಿಚಕ್ರ ವಾಹನ ಖರೀದಿಸುವ ಸಮಯದಲ್ಲಿ, ಕೇಂದ್ರ ಮೋಟಾರ್ ವಾಹನಗಳ ತಿದ್ದುಪಡಿ ನಿಯಮಗಳು, 2025 ಪ್ರಾರಂಭವಾದ ದಿನಾಂಕದಿಂದ ಮೂರು ತಿಂಗಳೊಳಗೆ, ದ್ವಿಚಕ್ರ ವಾಹನ ತಯಾರಕರು ದ್ವಿಚಕ್ರ ವಾಹನ ಖರೀದಿಸುವ ಸಮಯದಲ್ಲಿ ಭಾರತೀಯ ಮಾನದಂಡಗಳ ಬ್ಯೂರೋ ಸೂಚಿಸಿದ ವಿಶೇಷಣಗಳಿಗೆ ಅನುಗುಣವಾಗಿ ಎರಡು ರಕ್ಷಣಾತ್ಮಕ ಹೆಲ್ಮೆಟ್ ಒದಗಿಸಬೇಕಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒದಗಿಸಲಾದ ಹೆಲ್ಮೆಟ್‌ಗಳು ಭಾರತೀಯ ಮಾನದಂಡಗಳ ಬ್ಯೂರೋ ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಪೂರೈಸಬೇಕು. ಆದಾಗ್ಯೂ, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 129 ರ ಅಡಿಯಲ್ಲಿ ವಿನಾಯಿತಿ ಪಡೆದ ವ್ಯಕ್ತಿಗಳಿಗೆ ಈ ಅವಶ್ಯಕತೆ ಅನ್ವಯಿಸುವುದಿಲ್ಲ ಎಂದು ಹೇಳಿದೆ
ಹೆಲ್ಮೆಟ್ ನಿಬಂಧನೆಯ ಜೊತೆಗೆ, ಸರ್ಕಾರ ಮತ್ತೊಂದು ಸುರಕ್ಷತಾ ಕ್ರಮವನ್ನು ಸಹ ಪ್ರಸ್ತಾಪಿಸಿದೆ.2026 ರ ಜನವರಿ 1 ರಿಂದ ಅನ್ವಯವಾಗುವಂತೆ 50 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಅಥವಾ 50 ಕಿಮೀ/ಗಂಟೆಗಿಂತ ಹೆಚ್ಚಿನ ವೇಗವನ್ನು ಹೊಂದಿರುವ ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಒಳಗೊಂಡಂತೆ ಎಲ್ಲಾ ಹೊಸ ಎಲ್ 2 ವರ್ಗದ ದ್ವಿಚಕ್ರ ವಾಹನಗಳನ್ನು ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸುವುದು ಕಡ್ಡಾಯವಾಗಿದೆ