ಕನ್ನಡ ಕರಾವಳಿ ಸುದ್ದಿ: ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ವತಿಯಿಂದ ಯಡಾಡಿ- ಮತ್ಯಾಡಿಯ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ್ ಪಿಯು ಕಾಲೇಜಿನ ವಿದ್ಯಾರಣ್ಯ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಮಂಥನ ಬೇಸಿಗೆ ಶಿಬಿರ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು ಇದರ ಪ್ರಾಂಶುಪಾಲರಾದ ಪ್ರೊ.ಭಾಸ್ಕರ ಶೆಟ್ಟಿ ಮಾತನಾಡಿ, “ನಮ್ಮ ಬದುಕಿಗೆ ಅಗತ್ಯವಾದ ಕಲೆಗಳನ್ನು, ತತ್ವಗಳನ್ನು, ಕೌಶಲಗಳನ್ನು, ಬೇಸಿಗೆ ಶಿಬಿರದಲ್ಲಿ ಕಲಿಸ ಕೊಡುತ್ತಾರೆ.ಅವುಗಳನ್ನು ಮಕ್ಕಳು ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕನ್ನು ಇನ್ನಷ್ಟು ಸರಳವಾಗಿಸಿ ಉಲ್ಲಾಸಮಯವಾಗಿರಿಸಿಕೊಳ್ಳಬಹುದು.ಶಿಕ್ಷಣದಲ್ಲಿ ಪಾಠ ಅಧ್ಯಯನದ ಜೊತೆ ಬದುಕನ್ನು ಕಟ್ಟಿ ಕೊಡುವ ಪಠ್ಯೇತರ ಚಟುವಟಿಕೆಗಳ ಕಲಿಕೆ ಅತ್ಯಗತ್ಯ. ಮಕ್ಕಳ ಸರ್ವತೋಮುಖ ಪ್ರಗತಿಗೆ ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯವಾಗಿದೆ.ಈ ತರಬೇತಿ ಕಾರ್ಯಕ್ರಮಗಳು,ಮಾಹಿತಿ ಕಾರ್ಯಕ್ರಮಗಳು,ಚಟುವಟಿಕೆಗಳು ನಮ್ಮ ಬದುಕನ್ನು ಪರಿಪೂರ್ಣತೆಯತ್ತ ಕೊಂಡೊಯ್ಯಲು ಸಹಕಾರಿಯಾಗುತ್ತದೆ.ಈ ಸಂಸ್ಥೆಯು ಇಂತಹ ಒಂದು ಉತ್ಕೃಷ್ಟ ಮಟ್ಟದ ಬೇಸಿಗೆ ಶಿಬಿರವನ್ನು ಆಯೋಜಿಸಿರುವುದು ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ.ಮಕ್ಕಳು ಈ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು”ಎಂದರು.
ಮುಖ್ಯ ಅತಿಥಿಗಳಾಗಿ ಬಿದ್ಕಲ್ ಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಘವೇಂದ್ರ ಹೆಬ್ಬಾರ್ ಮಾತನಾಡಿ”ಮಕ್ಕಳು ಬದುಕಿನಲ್ಲಿ ಕನಸು ಕಾಣಬೇಕು ಮತ್ತು ಕಂಡ ಕನಸುಗಳನ್ನು ನನಸಾಗಿಸುವತ್ತಾ ಪ್ರಯತ್ನಿಸಬೇಕು.ನಮ್ಮ ಸಾಧನೆಯ ಹಾದಿಯಲ್ಲಿ ಸವಾಲುಗಳು,ಸಮಸ್ಯೆಗಳು ಎದುರಾದರೂ ಅವುಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸು ಕಾಣಬೇಕು. ನಮಗೆ ಅವಕಾಶಗಳು ಯಾವಾಗಲೂ ಸಿಗುವುದಿಲ್ಲ ಹಾಗಾಗಿ ಸಿಕ್ಕಿದ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು.ಇಂತಹ ಉತ್ತಮವಾದ ಬೇಸಿಗೆ ಶಿಬಿರಗಳು ಮಕ್ಕಳ ಆಸಕ್ತಿದಾಯಕ ಕಲಿಕೆಗೆ ನೆರವಾಗಲಿದೆ ಮತ್ತು ಸಂಸ್ಥೆಯ ಕಾರ್ಯ ಅಭಿನಂದನೀಯ”ಎಂದರು. ಕಾರ್ಯಕ್ರಮದಲ್ಲಿ,ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷರಾದ ಕಿಶೋರ್ ಶೆಟ್ಟಿ, ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ, ಸುಜ್ಞಾನ್ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾಗಿರುವ ಡಾ.ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ.ಉಪಸ್ಥಿತರಿದ್ದರು.
“ಮಂಥನ ಬೇಸಿಗೆ ಶಿಬಿರ” 4ನೇ ದಿನದ ಕಾರ್ಯಕ್ರಮದ ವಿಶೇಷತೆ
ಪ್ರತಿಭಾನ್ವಿತ ಯಕ್ಷಗಾನ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಅಶ್ವಿನಿ ಕೊಂಡದಕುಳಿ ಅವರಿಂದ ಯಕ್ಷಗಾನ ತರಬೇತಿ,ಪ್ರಶಸ್ತಿ ಪುರಸ್ಕೃತ ಕಲಾವಿದ ಎಸ್.ಎಫ್.ಹುಸೇನಿ ಮೈಸೂರು ಅವರಿಂದ ಪೇಪರ್ ಕ್ರಾಪ್ಟ್ ತಯಾರಿಕೆ, ಶಿಕ್ಷಕ ಗಿರೀಶ್ ಅವರಿಂದ ಚಿತ್ರಕಲೆ ತರಬೇತಿ ನಡೆಯಿತು. ಮಕ್ಕಳು ಬಹಳ ಉತ್ಸುಕತೆಯಿಂದ ನಾಲ್ಕನೇ ದಿನದ ಶಿಬಿರದಲ್ಲಿ ಪಾಲ್ಗೊಂಡರು.