ಮಧ್ಯರಾತ್ರಿ ಕಳ್ಳತನ ಮಾಡಲು ಹಾಸ್ಟೆಲಿಗೆ ನುಗ್ಗಿದ ಕಳ್ಳನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ ವಿದ್ಯಾರ್ಥಿನಿಯರು
Views: 26
ಕನ್ನಡ ಕರಾವಳಿ ಸುದ್ದಿ:ಚಿಕ್ಕಮಗಳೂರು ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್ಗೆ ಮಧ್ಯರಾತ್ರಿ ನುಗ್ಗಿ ಯುವಕಮೋರ್ವ ಓಡಾಟ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಹೊರವಲಯದಲ್ಲಿ ನಡೆದಿದೆ.
ಹುಡುಗಿಯ ಹಾಸ್ಟೆಲ್ನಲ್ಲಿ ಮಧ್ಯರಾತ್ರಿ ಯುವಕನ ಕಂಡು ವಿದ್ಯಾರ್ಥಿನಿಯರು ಗಾಬರಿಗೊಂಡಿದ್ದು, ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಪ್ರಕರಣ ಸಂಬಂಧ ಆರೋಪಿ ಉತ್ತರ ಪ್ರದೇಶ ಮೂಲದ ರಾಕೇಶ್ (30) ಎಂಬಾತನನ್ನು ಬಂಧಿಸಲಾಗಿದೆ.
ವಿದ್ಯಾರ್ಥಿನಿಯರು ವಸತಿ ಪಡೆದಿರುವ ಮೆಡಿಕಲ್ ಕಾಲೇಜಿನ ಈ ಹಾಸ್ಟೆಲ್ನಲ್ಲಿ ಇಂತಹ ಘಟನೆಗಳು ಹೊಸದೇನೂ ಅಲ್ಲ. ಈ ಹಿಂದೆಯೂ ಇದೇ ಮಾದರಿಯ ಘಟನೆಗಳು ನಡೆದಿದ್ದವು. ಹೀಗಿದ್ದರೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಯುವತಿಯರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮೆಡಿಕಲ್ ಕಾಲೇಜು ಡೀನ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೆಡಿಕಲ್ ಕಾಲೇಜು ಹಾಸ್ಟೆಲ್ ಭದ್ರತೆ ಬಗ್ಗೆ ಭಾರಿ ಚರ್ಚೆಗಳು ಶುರುವಾಗಿವೆ.
ಇನ್ನು ಆರೋಪಿ ರಾಕೇಶ್ ಮೆಡಿಕಲ್ ಕಾಲೇಜು ಕಟ್ಟಡದ ಕಾಮಗಾರಿ ನಡೆಸುತ್ತಿದ್ದ ಕಾರ್ಮಿಕನೇ ಎಂಬುದು ಗೊತ್ತಾಗಿದೆ. ಹಾಸ್ಟೆಲ್ನೊಳಗೆ ನುಗ್ಗಿ ವಿದ್ಯಾರ್ಥಿನಿಯರ ಜೊತೆ ಆರೋಪಿ ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎನ್ನಲಾಗಿದ್ದು, ಈತನನ್ನು ವಿದ್ಯಾರ್ಥಿನಿಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾನುವಾರ ರಾತ್ರಿ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರ ಕೈಯಿಂದ ತಪ್ಪಿಸಿಕೊಂಡು ಓಡಿಹೋಗಲು ಆರೋಪಿ ಯತ್ನಿಸಿದ್ದ. ಹೀಗಾಗಿ ಯಾವ ಕಾರಣಕ್ಕೆ ಈತ ಯುವತಿಯರ ಹಾಸ್ಟೆಲ್ಗೆ ತೆರಳಿದ್ದ ಎಂಬುದನ್ನು ಪೊಲೀಸರು ವಿಚಾರಣೆ ನಡೆಸಿದಾಗ, ಕಳ್ಳತನ ಮಾಡಲು ಹೋಗೊದ್ದೆ ಎಂದು ರಾಕೇಶ್ ತಪ್ಪೊಪ್ಪಿಕೊಂಡಿದ್ದಾನೆ . ಈ ಹಿಂದೆಯೂ ಆರೋಪಿ ರಾಕೇಶ್ ಹಾಸ್ಟೆಲ್ಗೆ ನುಗ್ಗಿದ್ದ. ಹೀಗಿದ್ದೂ ಮತ್ತೊಮ್ಮೆ ಅಂತಹುದ್ದೇ ಕೆಲಸ ಮಾಡಿದ್ದಾನೆ ಎಂಬುದು ತನಿಖೆ ವೇಳೆ ಬಯಲಾಗಿದೆ.






