BREAKING NEWS: ಕಾಳಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸ್ಥಳ ಪರಭಾರೆ: ಶಾಲೆ ಉಳಿವಿಗಾಗಿ ಬೃಹತ್ ಪ್ರತಿಭಟನೆ

Views: 389
ಕನ್ನಡ ಕರಾವಳಿ ಸುದ್ದಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಳಾವರ ಇದರ ಸ್ಥಳವು ನ್ಯಾಯಾಲಯದ ಆದೇಶದಂತೆ ಬೇರೆಯವರ ಹೆಸರಿಗೆ ಪರಭಾರೆಯಾಗುತ್ತಿರುವುದನ್ನು ವಿರೋಧಿಸಿ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಗ್ರಾಮ ಪಂಚಾಯತ್ ಸದಸ್ಯರು, ಹಳೆ ವಿದ್ಯಾರ್ಥಿ ಸಂಘ,ವಿದ್ಯಾರ್ಥಿಗಳ ಪೋಷಕರು, ಹಾಗೂ ಕಾಳಾವರ ಗ್ರಾಮದ ವಿದ್ಯಾಭಿಮಾನಿಗಳು ಬಹು ಸಂಖ್ಯೆಯಲ್ಲಿ ಸೇರಿ ನ.7ರಂದು ಕಾಳಾವರ ಗ್ರಾಮ ಪಂಚಾಯತ್ ಎದುರು ಬೃಹತ್ ಧರಣಿ ಮುಷ್ಕರ ನಡೆಸಿದರು.
ಗ್ರಾಮ ಪಂಚಾಯತ್ ಹಿರಿಯ ಸದಸ್ಯ ರಾಮಚಂದ್ರ ನಾವಡ, ಸದಸ್ಯ ಜಯಪ್ರಕಾಶ್ ಶೆಟ್ಟಿ, ಪ್ರೊಫೆಸರ್ ಶಂಕರ್ ರಾವ್, ರಘುವೀರ ಮಾಸ್ಟರ್, ವಕೀಲರಾದ ಪ್ರದೀಪ್ ಕುಮಾರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ, ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ, ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದರು.
103 ವರ್ಷಗಳ ಇತಿಹಾಸವಿರುವ ಈ ಶಾಲೆಯ 67 ಸೆಂಟ್ಸ್ ಜಾಗವನ್ನು 1954ನೇಯ ಇಸವಿಯಲ್ಲಿ ಆಗಿನ ಮಂಗಳೂರು ಜಿಲ್ಲಾ ಡಿಸ್ಟ್ರಿಕ್ಟ್ ಬೋರ್ಡ್ ಪ್ರೆಸಿಡೆಂಟ್ ಆಗಿದ್ದ ದಿವಂಗತ ಕಾಪು ಸಂಜೀವ ಶೆಟ್ಟಿ ಅವರು ಕಾಳಾವರದ ಮಂಜಮ್ಮ ಶೆಡ್ತಿಯವರಿಂದ ಖರೀದಿಸಿ ಡಿಸ್ಟ್ರಿಕ್ಟ್ ಬೋರ್ಡ್ ಹೆಸರಿಗೆ ದಾನ ಪತ್ರ ಮಾಡಿಸಿದ್ದರು. ಆದರೆ ಖಾಸಗಿ ಯೊಬ್ಬರು 1960ರಲ್ಲಿ ಇತರೆ ಜಮೀನುಗಳೊಂದಿಗೆ ಈ ಶಾಲಾ ಸ್ಥಳವನ್ನು ಕೂಡ ಖರೀದಿಸಿದ್ದರು. ಇದೇ ಖರೀದಿದ ದಾಖಲೆಯನ್ನು ಬಳಸಿ ಕುಂದಾಪುರ ತಾಲೂಕು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿ ಶಾಲೆಯಲ್ಲಿ ದಾನ ಪತ್ರದ ಪ್ರತಿ ಲಭ್ಯವಿಲ್ಲದ ಕಾರಣ ಅವರ ಪರವಾಗಿ ತೀರ್ಪು ಪಡೆದಿದ್ದರು. ಅಲ್ಲದೆ ಶಾಲೆಯನ್ನು ತೆರೆವುಗೊಳಿಸುವ ಆದೇಶ ನೀಡುವಂತೆ ಪುನಹ ಕೋರ್ಟ್ ನಲ್ಲಿ ದಾವೆ ಹೊಡಿರುತ್ತಾರೆ. ಇದೀಗ ಈಗಿನ ಮುಖ್ಯೋಪಾಧ್ಯಾಯರು ಸಬ್ ರಿಜಿಸ್ಟ್ರಾರ್ ಕುಂದಾಪುರ, ಇವರಿಂದ ದಾನ ಪತ್ರದ ಪ್ರತಿಯನ್ನು ಪಡೆದಿರುತ್ತಾರೆ.ಈಗ ಆಸ್ತಿ ಶಾಲೆಯದ್ದೇ ಎಂಬ ಪಕ್ಕಾ ಸಾಕ್ಷ್ಯ ಇದೆ. ಹೀಗಾಗಿ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಉಚ್ಚ ನ್ಯಾಯಾಲಯದ ತಡೆಯಾಜ್ಞೆ ತರುವರೆ ಮೇಲ್ಮನವಿ ಸಲ್ಲಿಸಿರುತ್ತಾರೆ.ಆದರೂ ಸರಕಾರದ ಗಮನ ಸೆಳೆಯುವುದಕ್ಕಾಗಿ ಈ ದಿನ ಈ ಧರಣಿ ಮುಷ್ಕರ ನಡೆದಿರುತ್ತದೆ. ಕುಂದಾಪುರ ತಾಲೂಕು ತಹಶೀಲ್ದಾರ್ ಶೋಭಾಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ್ ಹಾಗೂ ಗ್ರಾಮ ಅಭಿವೃದ್ಧಿ ಅಧಿಕಾರಿ ಮಂಜು ಬಿಲ್ಲವ ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಮೋಹನ್ ಚಂದ್ರ ಕಾಳಾವರ್ ಕಾರ್ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.