ಕಾಳಾವರ ಗ್ರಾಮ ಪಂಚಾಯಿತಿಯಿಂದ “ಬಿಪಿಎಲ್ ಕಾರ್ಡ್ ಸಮಸ್ಯೆ ಬಗೆಹರಿಸಿ”, ಮುಖ್ಯಮಂತ್ರಿಗೆ ಪತ್ರ

Views: 96
ಕುಂದಾಪುರ: ಬಿಪಿಎಲ್ ಪಡಿತರ ಚೀಟಿ ಸಮಸ್ಯೆ ಬಗೆಹರಿಸುವ ಕುರಿತು ಕಾಳಾವರ ಗ್ರಾಮ ಪಂಚಾಯತ್ ನಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿವಿಧ ನಿರ್ಣಯ ಕೈಗೊಂಡಿದ್ದು, ಈ ಬಗ್ಗೆ ಸರಕಾರ ಗಮನಹರಿಸಿ ಸಾರ್ವಜನಿಕರ ಹಿತ ದೃಷ್ಟಿಯಿಂದ ಆದೇಶ ಹೊರಡಿಸುವ ಸಲುವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಾಗಿದೆ.
ಪತ್ರದಲ್ಲಿ ಏನಿದೆ?
ಬಿಪಿಎಲ್ ಕಾರ್ಡ್ ಪರಿಶೀಲನೆ ನೆಪದಲ್ಲಿ ಜನರಿಗೆ ತಾಲೂಕು ಕಚೇರಿ ಅಲೆದಾಟ ತಪ್ಪಿಸಬೇಕು. ಪ್ರತಿ ಮನೆಯನ್ನು ಹೊಸದಾಗಿ ಸರ್ವೆ ಮಾಡಿ ಎಪಿಎಲ್ ಹಾಗೂ ಬಿಪಿಎಲ್ ಪಟ್ಟಿ ತಯಾರಿಸಬೇಕು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆ ಕರೆದು ಎಪಿಎಲ್ ಹಾಗೂ ಬಿಪಿಎಲ್ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿ ಫಲಾನುಭವಿಗಳ ಆಯ್ಕೆ ಮಾಡಬೇಕು. ಮರಣ ಹೊಂದಿದವರ ಹೆಸರು ಹಾಗೂ ಉದ್ಯೋಗ ನಿಮಿತ್ತ ಬೇರೆ ಕಡೆ ವಲಸೆ ಹೋದವರ ಬಗ್ಗೆ ಸಮೀಕ್ಷೆ ಮಾಡಿ ಅವರ ಹೆಸರನ್ನು ಪಡಿತರ ಚೀಟಿಯನ್ನು ಕೈಬಿಡಬೇಕು. ಪ್ರತಿ ನ್ಯಾಯಬೆಲೆ ಅಂಗಡಿಯಲ್ಲಿ ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿ ಹೊಂದಲು ಇರುವ ಅರ್ಹತೆಯನ್ನು ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಬೇಕು. ಸರಕಾರದ ಯೋಜನೆಗಳಿಗೆ ಪಡಿತರ ಚೀಟಿಯನ್ನು ಬಿಪಿಎಲ್ ಮನದಂಡವಾಗಿ ಅನುಸರಿಸುವುದು ನಿಲ್ಲಿಸಬೇಕು. ಸರಕಾರಿ ಯೋಜನೆಗಳಿಗೆ ಪ್ರತ್ಯೇಕ ಬಿಪಿಎಲ್ ಗುರುತಿನ ಚೀಟಿ ನೀಡಬೇಕು. ಪಡಿತರ ಚೀಟಿ ರದ್ದು ಮಾಡುವ ಮೊದಲು ಫಲಾನುಭವಿಗಳಿಗೆ ಕಾರಣ ನೀಡಿ ಉತ್ತರಿಸಲು ಒಂದು ತಿಂಗಳ ಅವಕಾಶ ನೀಡಬೇಕು. ಆದರ ಯಥಾಪ್ರತಿ ಸ್ಥಳೀಯ ಗ್ರಾಮ ಪಂಚಾಯಿತಿಗಳ ಗಮನಕ್ಕೆ ತರಬೇಕು. ಆದಾಯ ತೆರಿಗೆ ಪಾವತಿ ಮಾಡುವವರನ್ನು ಮಾತ್ರ ಪರಿಗಣಿಸಿ ಬಿಪಿಎಲ್ ಪಟ್ಟಿಯನ್ನು ತೆಗೆದು ಉಳಿದ ಶೈಕ್ಷಣಿಕ, ಮನೆ, ಮದುವೆ, ನಿತ್ಯ ಉಪಯೋಗದ ಸಣ್ಣ ವಾಹನಗಳಿಗಾಗಿ ಬ್ಯಾಂಕ್ನಿಂದ ಸಾಲ ಪಡೆದವರನ್ನು ಐಟಿ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂಬ ಕಾರಣದಿಂದ ಬಿಪಿಎಲ್ ಪಟ್ಟಿಯನ್ನು ತೆಗೆಯಲಾಗುತ್ತಿದ್ದು, ಈ ನೀತಿ ಬದಲಾಗಬೇಕು. ಇವತ್ತಿನ ಬೆಲೆ ಏರಿಕೆಗೆ ಅನುಗುಣವಾಗಿ ಆದಾಯದ ಮಿತಿ ರೂ.1.20 ಲಕ್ಷದಿಂದ 3 ಲಕ್ಷಕ್ಕೆ ಹೆಚ್ಚಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿಗಳು ಸಹಿತ ಆಹಾರ ಇಲಾಖೆಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಗಿದೆ.