ವಿವೇಕ ಪ.ಪೂ.ಕಾಲೇಜು : ‘ಪರೀಕ್ಷೆ ಎದುರಿಸುವುದು ಹೇಗೆ? ಮಾಹಿತಿ ಕಾರ್ಯಕ್ರಮ

Views: 62
ಕುಂದಾಪುರ: ಪರೀಕ್ಷಾ ಭಯ ನಿವಾರಣೋಪಾಯದ ಕುರಿತಾಗಿ ಮಾಹಿತಿ ಕಾರ್ಯಕ್ರಮವನ್ನು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ವಿಜ್ಞಾನ ಸಂಘ ‘ವಿಶನ್’ ಇದರ ವತಿಯಿಂದ ಏರ್ಪಡಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಶ್ರೀಮಾತಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಪ್ರಸಿದ್ಧ ಮಾನಸಿಕ ತಜ್ಞ ಡಾ| ಪ್ರಕಾಶ್ ತೋಳಾರ್ ಇವರು ಆಗಮಿಸಿ ಮಾತನಾಡಿ, ‘ವಿದ್ಯಾರ್ಥಿಗಳು ತರಗತಿಯಲ್ಲಿ ಏಕಾಗ್ರತೆಯಿಂದ ಪಾಠವನ್ನು ಕೇಳಬೇಕು. ಮನೆಗೆ ತೆರಳಿದ ನಂತರ ಅಂದು ಮಾಡಿದ ಪಾಠಗಳನ್ನು ಅಂದೇ ಓದಿ ತಿಳಿದುಕೊಳ್ಳಬೇಕು. ಹಾಗೆಯೇ ಓದಿದ ಪಾಠಗಳನ್ನು ಮನನ ಮಾಡಿಕೊಳ್ಳುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಮನಸ್ಸಿನಲ್ಲಿ ಯಾವುದೇ ಭಯವಿಲ್ಲದೇ ಪರೀಕ್ಷೆಯನ್ನು ಎದುರಿಸುತ್ತೇನೆ ಎಂಬ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಕಡಿಮೆ ಅಂಕ ಬಂದಲ್ಲಿ ಕುಗ್ಗದೇ ಮುಂದೆ ಸಾಗುವ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂಬುದನ್ನು ತಿಳಿಸುತ್ತಾ ವಿವಿಧ ರೀತಿಯ ಓದುವ ಮನದಟ್ಟು ಮಾಡಿಕೊಳ್ಳುವ ಬಗೆಯನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕೆ. ಜಗದೀಶ ನಾವಡರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.
ವಿದ್ಯಾರ್ಥಿನಿ ಕುಮಾರಿ ಪ್ರತಿಜ್ಞಾ ಪ್ರಾರ್ಥಿಸಿದರು. ಕುಮಾರಿ ಎಚ್. ಸಹನಾ ಕಾಮತ್ ವಂದಿಸಿದರು.
ವಿಜ್ಞಾನ ಸಂಘದ ಸಂಯೋಜಕರಾದ ಶ್ರೀ ರವಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.