ಬಾಬಾ ರಾಮ್ ದೇವ್ ಪತಂಜಲಿ ತಪ್ಪು ದಾರಿಗೆಳೆಯುವ ಕಾಯ್ದೆ ಉಲ್ಲಂಘನೆ: ಕಾನೂನು ಕ್ರಮಕ್ಕೆ ಸೂಚನೆ

Views: 65
ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದ ‘ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ನಿಯಂತ್ರಿಸುವ ಕಾಯ್ದೆಯನ್ನು ಪದೇ ಪದೇ ಉಲ್ಲಂಘಿಸಿರುವುದಕ್ಕೆ’ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಮಂತ್ರಿ ಕಚೇರಿ ಆಯುಷ್ ಸಚಿವಾಲಯಕ್ಕೆ ನಿರ್ದೇಶಿಸಿದೆ.
ಈ ಕುರಿತು ಜನವರಿ 24ರಂದು ಆಯುಷ್ ಸಚಿವಾಲಯಕ್ಕೆ ಪಿಎಂಒ ನಿರ್ದೇಶನ ನೀಡಿದ್ದು, ಫೆಬ್ರವರಿ 2022 ರಿಂದ ಬಾಕಿ ಉಳಿದಿರುವ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಚಿವಾಲಯವು ಉತ್ತರಾಖಂಡ ಆಯುಷ್ ಇಲಾಖೆಗೆ ಸೂಚಿಸಿದೆ.
ಪತಂಜಲಿ ಮಧುಮೇಹ, ಬೊಜ್ಜು, ಥೈರಾಯ್ಡ್ ಮತ್ತು ಹೃದ್ರೋಗಗಳ ಔಷಧಗಳ ಕುರಿತು ತಪ್ಪುದಾರಿಗೆಳೆಯುವ ಜಾಹೀರಾತು ನೀಡುತ್ತಿದೆ ಎಂದು ಹಲವು ಆರ್‌ಟಿಐ ಮಾಹಿತಿ ಬಳಿಕವೂ ಆಯುಷ್ ಸಚಿವಾಲಯ ಮತ್ತು ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರ (SLA) ಎರಡೂ ಮೌನವಾಗಿತ್ತು. ಡೆಹ್ರಾಡೂನ್‌ನಲ್ಲಿನ ಆಯುರ್ವೇದ ಮತ್ತು ಯುನಾನಿ ಸೇವೆಗಳು ನಿರ್ದೇಶಕರಿಗೆ ಬರೆದ ಪತ್ರದಲ್ಲಿ, ದಿವ್ಯ ಫಾರ್ಮಸಿಯಿಂದ ಔಷಧ ಹಾಗೂ ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಕಾಯ್ದೆ)-1954ರ ನಿರಂತರ ಉಲ್ಲಂಘನೆಗೆ ಸಂಬಂಧಿಸಿ ವಿಷಯವು ಉತ್ತರಾಖಂಡದ ರಾಜ್ಯ ಪರವಾನಿಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಈ ವಿಷಯವನ್ನು ಪರಿಶೀಲಿಸುವಂತೆ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹಾಗೂ ಈ ಸಚಿವಾಲಯದ ಸೂಚನೆಯಂತೆ ಮಾಹಿತಿಯನ್ನು ಅರ್ಜಿದಾರರಿಗೆ ತಿಳಿಸುವಂತೆ ಫೆಬ್ರವರಿ 2ರಂದು ಸೂಚಿಸಲಾಗಿದೆ.
ಪತಂಜಲಿ ಆಯುರ್ವೇದ DMR (OA) ಕಾಯಿದೆ- 1954ರ ಮತ್ತೆ ಮತ್ತೆ ಉಲ್ಲಂಘನೆಯ ಬಗ್ಗೆ RTI ಕಾರ್ಯಕರ್ತ ಡಾ ಕೆ ವಿ ಬಾಬು ಅವರು ಜನವರಿ 15 ರಂದು ಪ್ರಧಾನ ಮಂತ್ರಿಗಳ ಕಚೇರಿಗೆ (PMO) ದೂರು ನೀಡಿದ ನಂತರ ಉತ್ತರಾಖಂಡ SLAಗೆ ನಿರ್ದೇಶನಗಳನ್ನು ನೀಡಲಾಗಿದೆ. ಮಧ್ಯಸ್ಥಿಕೆಗಾಗಿ ನಾನು ಪಿಎಂಒಗೆ ಕೃತಜ್ಞನಾಗಿದ್ದೇನೆ ಮತ್ತು ಇದು ಪತಂಜಲಿ ಆಯುರ್ವೇದ ಅಕ್ರಮ ಜಾಹೀರಾತುಗಳನ್ನು ಕೊನೆಗೊಳಿಸುತ್ತದೆ ಎಂದು ಭಾವಿಸುತ್ತೇನೆ ಎಂದು ಬಾಬು ಹೇಳಿದರು. ಫೆಬ್ರವರಿ 2022ರಿಂದ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ), ಕೇಂದ್ರ ಆಯುಷ್ ಸಚಿವಾಲಯ ಮತ್ತು ಉತ್ತರಾಖಂಡದ ಎಸ್‌ಎಲ್‌ಎನಲ್ಲಿ ಈ ಕುರಿತ ದೂರುಗಳು ಬಾಕಿ ಉಳಿದಿವೆ ಎಂದು ಬಾಬು ಹೇಳಿದ್ದಾರೆ.
ಆಯುಷ್ ಸಚಿವಾಲಯ ಸಮಸ್ಯೆಯ ಬಗ್ಗೆ ಕ್ರಮ ಕೈಗೊಳ್ಳದೆ ಮುಂದೂಡುತ್ತಿದೆ. ಪದೇ ಪದೇ ಮ್ಯಾಜಿಕ್ ರೆಮಿಡೀಸ್ ಆಕ್ಟ್‌ನ ಉಲ್ಲಂಘನೆಗಳು ನಡೆಯುತ್ತಿದ್ದರೂ SLA ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಆಯುಷ್ ಸಚಿವಾಲಯವು ಪತಂಜಲಿ ವಿರುದ್ಧ ಕ್ರಮಕ್ಕಾಗಿ ಉತ್ತರಾಖಂಡ ಎಸ್‌ಎಲ್‌ಎಗೆ ಕನಿಷ್ಠ 4 ಬಾರಿ ಪತ್ರ ಬರೆದಿದೆ ಆದರೆ ಏನೂ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.
ಬಾಬು ಅವರು ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅವರೊಂದಿಗೆ ಹಲವು ಬಾರಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಸಂಸದರಾದ ಡಾ ವಿ ಶಿವದಾಸನ್ ಮತ್ತು ಕಾರ್ತಿ ಪಿ ಚಿದಂಬರಂ ಕಳೆದ ವರ್ಷವೂ ಈ ವಿಷಯವನ್ನು ಆಯುಷ್ ಸಚಿವಾಲಯದ ಮುಂದೆ ಪ್ರಸ್ತಾಪಿಸಿದ್ದರು. ಈ ವೇಳೆ ಸಚಿವಾಲಯವು ಅವರಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿತ್ತು.