ಪುತ್ತೂರು:ಉದ್ಯೋಗ ನೀಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಲಕ್ಷಾಂತರ ವಂಚನೆ, ಮೂವರು ಸೆರೆ

Views: 25
ಪುತ್ತೂರು: ಉದ್ಯೋಗ ಕೊಡಿಸುವುದಾಗಿ ಹೇಳಿ ಹಣ ವಂಚಿಸಿರುವ ಪ್ರಕರಣ ಭೇದಿಸಿರುವ ಪುತ್ತೂರು ಗ್ರಾಮಾಂತರ ಪೊಲೀಸರು ಮೂವರನ್ನು ಸೆರೆಹಿಡಿದಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯ ಸುಮಿತ್ರ ಬಾಯಿ ಸಿ.ಆರ್.(23), ಹಾಸನದ ಹಳಸಿನಹಳ್ಳಿಯ ಸೌಂದರ್ಯ ಎಂ.ಎಸ್.(21), ತುಮಕೂರಿನ ಚಿಕ್ಕನಾಯಕನಹಳ್ಳಿಯ ರಾಹುಲ್ ಕುಮಾರ್ ನಾಯ್ಕ(19) ಬಂಧಿತ ಆರೋಪಿಗಳು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಚೇರಿ ಕೆಲಸಗಳು ಖಾಲಿ ಇವೆ. ನಿರುದ್ಯೋಗಿಗಳಿಗೆ ಬಂದ ದಿನವೇ ಕೆಲಸ ಸಿಗುತ್ತದೆ ಎಂಬುದಾಗಿ ಆರೋಪಿಗಳು ವಿವಿಧ ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ಕೆಲವರು ಜಾಹೀರಾತಿನಲ್ಲಿ ನಮೂದಿಸಿದ ಫೋನ್ ನಂಬರ್ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕರೆ ಸ್ವೀಕರಿಸಿದ್ದ ಆರೋಪಿಗಳು ನೀವು ಕೆಲಸಕ್ಕೆ ಸೇರ ಬಯಸಿದರೆ ಫೀಸ್ ಕೊಡಬೇಕು ಎಂದು ತಿಳಿಸಿದ್ದರು. ಅಂತೆಯೇ, ಕಳೆದ ಸುಮಾರು 7 ತಿಂಗಳಿನಿಂದ ಪದೇ ಪದೇ ಆನ್ಲೈನ್ ಮುಖಾಂತರ ಹಣ ಪಾವತಿ ಮಾಡುವಂತೆ ತಿಳಿಸಿದ್ದರು. ಗೂಗಲ್ ಪೇ ಮುಖಾಂತರ ಇದುವರೆಗೆ ಸುಮಾರು ಒಟ್ಟು 2,25,001 ರೂ. ಹಣವನ್ನು ಆರೋಪಿಗಳು ತಮ್ಮ ಖಾತೆಗೆ ಪಾವತಿ ಮಾಡಿಸಿದ್ದರು. ಇದಾದ ಬಳಿಕವೂ ಪದೇ ಪದೇ ಕರೆ ಮಾಡಿ ಇನ್ನೂ ಹಣ ನೀಡಬೇಕು ಎಂದು ಹೇಳಿ ಯಾವುದೇ ಉದ್ಯೋಗ ನೀಡದೇ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು.
ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.