ಕುಂದಾಪುರ ಲಾಡ್ಜ್‌ನಲ್ಲಿ10 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು, ಮುಂಬೈಯಲ್ಲಿ ಇಬ್ಬರು ಆರೋಪಿಗಳ ಬಂಧನ

Views: 174
ಕುಂದಾಪುರ: ಕೆಲವು ತಿಂಗಳ ಹಿಂದೆ ಕುಂದಾಪುರ ಲಾಡ್ಜ್‌ನಲ್ಲಿ ತಂಗಿದ್ದ ಚಿನ್ನದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್‌ನಿಂದ ಚಿನ್ನಾಭರಣ ಕಳವುಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಮುಂಬೈಯಲ್ಲಿ ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಸ್ಥಾನದ ಪಾಲಿ ಜಿಲ್ಲೆಯ ಖೋರ್ ಗ್ರಾಮದ ರಾಮ್ ರಾಯಲ್ ಯಾನೆ ಬಾಳು ರಾಮ್(21) ಹಾಗೂ ಸೇವಾರಿ ಗ್ರಾಮ ಬರ್ಲಾಬೆರಾ ಗ್ರಾಮದ ಪ್ರವೀಣ್ ಕುಮಾರ್(25) ಬಂಧಿತ ಆರೋಪಿಗಳು. ಇವರಿಂದ 10ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಶಾಹಬುದ್ದಿನ್ ಮಾಲಕತ್ವದ ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ ಜುವೆಲರಿಯ ಮಾರ್ಕೆ ಟಿಂಗ್ ಎಕ್ಸಿಕ್ಯೂಟಿವ್ ರಮೇಶ್ ಕುಮಾರ್ ಅವರು ಚಿನ್ನಾ ಭರಣ ಮಾರಾಟಕ್ಕೆಂದು 2023ರ ಜೂ.10ರಂದು ಕುಂದಾಪುರ ಕಡೆಗೆ ಬಂದಿದ್ದರು. ಉಪ್ಪುಂದಕ್ಕೆ ತೆರಳಿ, ಅಲ್ಲಿಂದ ಸಂಜೆ ವಾಪಸಾಗಿ, ರಾತ್ರಿ ಕುಂದಾಪುರದ ಖಾಸಗಿ ಹೊಟೇಲೊಂದರಲ್ಲಿ ಸ್ನೇಹಿತ ರಾಜಸ್ಥಾನ ಮೂಲದ ರಾಮ್ ಎಂಬಾತನ ಜತೆ 421 ಗ್ರಾಂ. ತೂಕದ ಚಿನ್ನಾಭರಣವನ್ನು ಮಂಚದ ಕೆಳಗಿಟ್ಟು ಮಲಗಿದ್ದರು. ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಎದ್ದು ನೋಡಿದಾಗ ರಾಮ್ ನಾಪತ್ತೆಯಾಗಿದ್ದು, ಚಿನ್ನಾಭರಣದ ಬ್ಯಾಗ್ ಕೂಡ ಇರಲಿಲ್ಲ. ಹೊರಗಿನಿಂದ ಬಾಗಿಲು ಹಾಕಲಾಗಿತ್ತು.
ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಕುಂದಾಪುರ ಪೊಲೀಸರು ಆರೋಪಿಗಳನ್ನು ಮುಂಬೈಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.