ಇತರೆ

ಕಾರ್ಕಳ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಮೃತದೇಹ ಉದ್ಯಾವರ ಹೊಳೆಯಲ್ಲಿ ಪತ್ತೆ 

Views: 131

ಕನ್ನಡ ಕರಾವಳಿ ಸುದ್ದಿ: ಕಾರ್ಕಳ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮ್ಯಾನೇಜರ್ ಮೃತದೇಹ ಉದ್ಯಾವರ ಹೊಳೆಯಲ್ಲಿ ಪತ್ತೆಯಾಗಿದೆ.

ಮೃತರನ್ನು ಕೇರಳ ಮೂಲದ ರಿಯಾಝ್ ಕೆ.ಕೆ.(49) ಎಂದು ಗುರುತಿಸಲಾಗಿದೆ.

ಮಣಿಪಾಲ ಕೆನರಾ ಬ್ಯಾಂಕ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಿಯಾಝ್, ಒಂದು ತಿಂಗಳ ಹಿಂದೆ ಕಾರ್ಕಳ ಕೆನರಾ ಬ್ಯಾಂಕ್‌ಗೆ ವರ್ಗಾವಣೆ ಹೊಂದಿದ್ದರು. ಉಡುಪಿ ನಗರದ ಫ್ಲ್ಯಾಟ್‌ನಲ್ಲಿ ವಾಸವಾಗಿರುವ ಇವರು ಒಂದು ತಿಂಗಳಿನಿಂದ ಪ್ರತಿದಿನ ಮನೆಯಿಂದ ಕಾರ್ಕಳಕ್ಕೆ ಹೋಗಿ ಬರುವುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈ ಸಂಬಂಧ ಅವರು ಮಣಿಪಾಲ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡಿದ್ದರು.

ಅವರು ಜೂ.26ರಂದು ರಜೆಯ ಕಾರಣ ಮನೆಯಲ್ಲಿದ್ದು ಬೆಳಗ್ಗೆ ದಿನಸಿ ತೆಗೆದುಕೊಂಡು ಬರುವುದಾಗಿ ಹೇಳಿ ಮೊಬೈಲ್‌ನ್ನು ಮನೆಯಲ್ಲಿ ಬಿಟ್ಟು ಸ್ಕೂಟರ್‌ನಲ್ಲಿ ಹೋಗಿದ್ದರು. ನಂತರ ರಿಯಾಝ್ ರಾತ್ರಿಯಾದರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಜೂ.27ರಂದು ನಸುಕಿನ ವೇಳೆ 1:30ರ ಸುಮಾರಿಗೆ ಸ್ಕೂಟರ್ ಉದ್ಯಾವರ ಸೇತುವೆ ಬಳಿ ಹಾಗೂ ಮೃತದೇಹವು ಉದ್ಯಾವರ ಪಾಪನಾಶಿನಿ ಹೊಳೆಯಲ್ಲಿ ಪತ್ತೆಯಾಯಿತು.

ಇವರು ಹೊಳೆಗೆ ಆಕಸ್ಮಾತ್ ಬಿದ್ದು ಅಥವಾ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles

Back to top button
error: Content is protected !!