ಇತರೆ

ಬೆಟ್ಟದ ಮೇಲಿಂದ ತಳ್ಳಿ ಕೊಲೆ.. ಇಬ್ಬರ ತಾಯಂದಿರ ಆರೋಪ ಪ್ರಕರಣಕ್ಕೆ ಟ್ವಿಸ್ಟ್! 

Views: 129

ಕನ್ನಡ ಕರಾವಳಿ ಸುದ್ದಿ: ಅದ್ಧೂರಿ ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಾಗ ವರನನ್ನು ಬೆಟ್ಟದ ಮೇಲಿಂದ ತಳ್ಳಿ ಕೊಂದಿರುವ ಯುವತಿಯ ಪಾಪದ ಕೃತ್ಯ ಸದ್ಯ ಇಡೀ ದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆ ತೀವ್ರಗೊಂಡ ಬೆನ್ನಲ್ಲೇ, ದಿನಕ್ಕೊಂದು ಸ್ಫೋಟಕ ಸಂಗತಿಗಳು ಹೊರಬೀಳುತ್ತಿವೆ.

ಪ್ರಸ್ತುತ ಕೇತನ್ ಕೊಲೆಗೈದ ಆರೋಪಿ ಸಿಯಾ ಗೋಯಲ್ ಬಂಧಿತಳಾಗಿದ್ದು, ಪೊಲೀಸರ ವಿಚಾರಣೆಯಲ್ಲಿ ಒಂದಷ್ಟು ವಿಷಯಗಳನ್ನು ಬಾಯ್ಬಿಟ್ಟಿದ್ದಾಳೆ. ಇದರ ಸುತ್ತವೇ ಇಲಾಖೆ ತನಿಖೆಯನ್ನು ತೀವ್ರಗೊಳಿಸಿದ್ದರೆ, ಅತ್ತ ಮಗನನ್ನು ಕಳೆದುಕೊಂಡ ತಾಯಿ ಮತ್ತು ಆರೋಪಿ ಪೋಷಕರ ನಡುವೆ ಆರೋಪ-ಪ್ರತ್ಯಾರೋಪಗಳ ವಾಕ್ಸಮರವೇ ನಡೆಯುತ್ತಿದೆ. ಇಬ್ಬರ ತಾಯಂದಿರೂ ತಮ್ಮದೇ ಹೊಸ ಹೊಸ ಆರೋಪಗಳನ್ನು ಮಾಡುತ್ತಿರುವುದು ಸದ್ಯ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿದೆ.

ಹತ್ಯೆಗೀಡಾದ ಕೇತನ್ ಅಗರ್ವಾಲ್ ತಾಯಿ ರಾಖಿ ಅಗರ್ವಾಲ್ ಹಾಗೂ ಆರೋಪಿ ಸಿಯಾ ಗೋಯಲ್ ಅಮ್ಮ ಪೂಜಾ ಗೋಯಲ್ ಮಾಧ್ಯಮಗಳ ಮುಂದೆ ಪರಸ್ಪರ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಸೊಸೆಯಾಗಿ ಬರಬೇಕಾದವಳೇ ನನ್ನ ಮಗನ ಪ್ರಾಣವನ್ನು ತೆಗೆದಿದ್ದಾಳೆ. ಎಲ್ಲಾ ಗೊತ್ತಿದ್ದರೂ ಆಕೆಯ ಕುಟುಂಬಸ್ಥರು ನಮಗೆ ಸತ್ಯಾಂಶ ಮುಚ್ಚಿಟ್ಟು, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ರಾಖಿ ಅಗರ್ವಾಲ್ ಕಣ್ಣೀರಿಟ್ಟಿದ್ದಾರೆ.

ಸಿಯಾ ನಮ್ಮ ಮನೆಗೆ ಅನೇಕ ಬಾರಿ ಬಂದಿದ್ದಳು. ನಮ್ಮೊಂದಿಗೆ ಹೋಳಿ ಹಬ್ಬವನ್ನೂ ಸಂಭ್ರಮದಿಂದ ಆಚರಿಸಿದ್ದಳು. ಮನೆಯ ಪೂಜೆ, ಇತರ ಕಾರ್ಯಕ್ರಮಗಳಲ್ಲೂ ಚೆನ್ನಾಗಿಯೇ, ಖುಷಿ ಖುಷಿಯಿಂದ ಎಲ್ಲರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಳು. ಅವಳು ಈ ಮದುವೆ ನಿಶ್ಚಯಗೊಂಡಾಗಿನಿಂದಲೂ ಇಷ್ಟವಿಲ್ಲ ಅಥವಾ ನಿರಾಕರಣೆ ಮಾಡುವ ಲಕ್ಷಣಗಳನ್ನು ತೋರಲಿಲ್ಲ. ಆಕೆಯ ಮುಖದಲ್ಲಿಯೂ ಅಂತಹ ಭಾವನೆಗಳು ನಮಗೆ ಕಾಣಿಸಲಿಲ್ಲ. ಒಂದು ಪಕ್ಷ ಸಿಯಾ ಅಥವಾ ಆಕೆಯ ಕುಟುಂಬಕ್ಕೆ ಈ ಮದುವೆ ಇಷ್ಟವಿಲ್ಲದಿದ್ದರೆ, ಅದನ್ನು ಮೊದಲೇ ನಮಗೆ ಹೇಳಬೇಕಿತ್ತು. ಸಣ್ಣ ಸುಳಿವು ಕೊಟ್ಟಿದ್ದರೂ ನಾವು ಈ ಸಂಬಂಧವನ್ನು ಅಲ್ಲಿಗೆ ಕೈಬಿಡುತ್ತಿದ್ದೆವು. ಕನಿಷ್ಠಪಕ್ಷ ನಮ್ಮ ಮಗನ ಜೀವವಾದರೂ ಉಳಿತ್ತಿತ್ತು ಎಂದು ಮೃತನ ತಾಯಿ ಆರೋಪಿಸಿದ್ದಾರೆ.

ಸಿಯಾ ಗೋಯಲ್ ನಡವಳಿಕೆಯ ಬಗ್ಗೆ ರಾಖಿ ಅಗರ್ವಾಲ್ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದು, “ಸಿಯಾ ಪಾರ್ಟಿಗಳಲ್ಲಿ ಮದ್ಯಪಾನ ಮಾಡುತ್ತಿದ್ದಳು. ಅಷ್ಟಕ್ಕೂ ನಮ್ಮ ಮನೆಯಲ್ಲಿ ಇಂಥ ಸಂಸ್ಕೃತಿಗಳಿಗೆ ಅವಕಾಶವಿಲ್ಲ. ಈ ಕಾರಣಕ್ಕಾಗಿಯೇ ನಾನು ಸಿಯಾಗೆ ಪಾರ್ಟಿಗಳಿಗೆ ಹೋದರೂ ಮದ್ಯವನ್ನು ಮುಟ್ಟಬಾರದು ಎಂದು ಮೊದಲೇ ಎಚ್ಚರಿಕೆ ನೀಡಿದ್ದೆ” ಎಂದಿದ್ದಾರೆ.

ಆರೋಪ ತಳ್ಳಿಹಾಕಿದ ಆರೋಪಿ ತಾಯಿ

ಪಾಪಿ ಮಗಳ ವಿರುದ್ಧ ರಾಖಿ ಅಗರ್ವಾಲ್ ಹೊರಿಸಿದ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆರೋಪಿ ಸಿಯಾ ತಾಯಿ, ಮದ್ಯಪಾನದ ಆರೋಪಗಳು ಶುದ್ಧ ಸುಳ್ಳು. ನನ್ನ ಮಗಳು ಯಾವತ್ತೂ ಕುಡಿದವಳಲ್ಲ. ಒಂದು ವೇಳೆ ಸಿಯಾಗೆ ಮದ್ಯಪಾನ ಮಾಡುವ ಅಭ್ಯಾಸವಿದ್ದಿದ್ದರೆ, ಕೇತನ್ ಕುಟುಂಬದವರು ಈ ವಿಷಯವನ್ನು ಮೊದಲೇ ನಮಗೆ ಏಕೆ ಹೇಳಲಿಲ್ಲ? ಈಗ ದುರಂತ ನಡೆದ ಮೇಲೆ ಹೀಗೆಲ್ಲ ಆರೋಪಿಸುತ್ತಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.

ನನ್ನ ಮಗಳಿಗೆ ಆ ಟ್ರೆಕ್ಕಿಂಗ್‌ಗೆ ಹೋಗಲು ಇಷ್ಟವಿರಲಿಲ್ಲ. ಸ್ವತಃ ಕೇತನ್ ಅವಳನ್ನು ಬಲವಂತವಾಗಿ ಅಲ್ಲಿಗೆ ಕರೆದುಕೊಂಡು ಹೋಗಿದ್ದ. ಸಂಬಂಧ ನಿಶ್ಚಯವಾಗುವ ಮೊದಲು ಮತ್ತು ನಂತರವೂ ನಾವು ಸಿಯಾಳನ್ನು ಹಲವು ಬಾರಿ ಕೇಳಿದ್ದೆವು. ಆಕೆ ಪ್ರತಿ ಬಾರಿಯೂ ಖುಷಿಯಿಂದಲೇ ನನಗೆ ಈ ಮದುವೆ ಇಷ್ಟ ಎಂದಿದ್ದಳು. ಅವಳಿಗೆ ಮತ್ತೊಬ್ಬ ಹುಡುಗನೊಂದಿಗೆ ಸಂಬಂಧವಿತ್ತು ಎಂಬ ವಿಷಯ ನಮಗಾಗಲಿ, ನಮ್ಮ ಕುಟುಂಬಕ್ಕಾಗಲಿ ಸಣ್ಣ ಸುಳಿವು ಕೂಡ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತನಿಖೆ ಚುರುಕುಗೊಳಿಸಿದ ಪುಣೆ ಪೊಲೀಸರು

ಒಂದೆಡೆ ಪುತ್ರನನ್ನು ಕಳೆದುಕೊಂಡ ದುಃಖದಲ್ಲಿ ತಾಯಿಯ ಆಕ್ರೋಶ, ಮತ್ತೊಂದೆಡೆ ಮಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಪೂಜಾ ವಾದ. ಈ ಇಬ್ಬರ ಹೇಳಿಕೆಗಳು ಪ್ರಕರಣವನ್ನು ನಿಗೂಢ ಎನ್ನುವಂತೆ ಮಾಡಿದೆ. ಸಿಯಾ ನಿಜಕ್ಕೂ ಪ್ರೀತಿಯ ನಾಟಕವಾಡಿ ಕೇತನ್‌ನನ್ನು ಹತ್ಯೆ ಮಾಡುವ ಪಿತೂರಿ ನಡೆಸಿದ್ದೇ ನಿಜನಾ ಅಥವಾ ಇದರ ಹಿಂದೆ ಬೇರೆ ಕಾರಣಗಳು ಏನಾದರೂ ಇದೆಯೇ? ಎಂಬ ನಿಟ್ಟಿನಲ್ಲಿ ಸದ್ಯ ಪುಣೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ,

Related Articles

Back to top button
error: Content is protected !!