ಕುಂದಾಪುರ ವಡೇರಹೋಬಳಿಯಲ್ಲಿ 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ,ನಗದು ಕಳ್ಳತನ
Views: 149
ಕನ್ನಡ ಕರಾವಳಿ ಸುದ್ದಿ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ರಾತ್ರೋ ರಾತ್ರಿ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಇಪ್ಪತ್ತು ಲಕ್ಷಕ್ಕೂ ಮಿಕ್ಕಿದ ಚಿನ್ನಾಭರಣ ವಜ್ರ, ರೇಷ್ಮೆ ಸೀರೆಗಳನ್ನು ಕಳವುಗೈದ ಘಟನೆ ಡಿಸೆಂಬರ್ 20ರ ಶುಕ್ರವಾರ ರಾತ್ರಿ ಕುಂದಾಪುರ ನಗರದ ಹೊರವಲಯದಲ್ಲಿ ನಡೆದಿದೆ.
ಕುಂದಾಪುರ ಹೋಬಳಿಯ ವಿಠಲವಾಡಿಗೆ ಹೋಗುವ ರಸ್ತೆಯಲ್ಲಿರುವ ಶಿವರಾಮ ಶೆಟ್ಟಿ ಎಂಬುವರ ಮನೆ ದರೋಡೆಗೊಳಗಾಗಿದ್ದು, ಮನೆಯಲ್ಲಿ ಶಿವರಾಮ ಶೆಟ್ಟಿ ಹಾಗೂ ಅವರ ಪತ್ನಿ ಮಮತ ಇಬ್ಬರೇ ವಾಸವಿರುತ್ತಿದ್ದರು. ಅವರ ಮಕ್ಕಳು ಬೆಂಗಳೂರಿನಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಇಬ್ಬರೂ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ಹೋಗಿದ್ದರೆನ್ನಲಾಗಿದೆ.
ಶನಿವಾರ ಬೆಳಿಗ್ಗೆ ಕೆಲಸದಾಕೆ ಹೂವಿನ ಗಿಡಕ್ಕೆ ನೀರು ಬಿಡಲು ಬಂದ ಸಂದರ್ಭ ಮನೆಯ ಬಾಗಿಲು ಅರ್ಧ ತೆರೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಮನೆಯ ಯಜಮಾನರಿಗೆ ಫೋನ್ ಮಾಡಿದ್ದಾಳೆ.
ಮನೆಯ ಒಳಗಡೆ ರೂಮ್‌ನಲ್ಲಿದ್ದ ಸುಮಾರು 142 ಗ್ರಾಂ ತೂಕದ ವಿವಿಧ ಬಗೆಯ ಅಂದಾಜು 8.52 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, 8 ಲಕ್ಷ ರೂ. ಮೌಲ್ಯದ 40 ಗ್ರಾಂ ವಜ್ರದ ಆಭರಣಗಳು, 2 ಲಕ್ಷ ರೂ. ನಗದನ್ನು ಕಳ್ಳತನಗೈದಿರುವುದಾಗಿದೆ. ಒಟ್ಟಾರೆ 18.52 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿದೆ. ಈ ಕುರಿತಂತೆ ಶಿವರಾಮ್ ಅವರ ಸ್ನೇಹಿತ ಗಣೇಶ್ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.