ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ: ಭಾರೀ ಮಳೆ ಮುನ್ಸೂಚನೆ
Views: 53
ಕನ್ನಡ ಕರಾವಳಿ ಸುದ್ದಿ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಹವಾಮಾನ ವೈಪರಿತ್ಯ ಉಂಟಾಗಿದೆ. ಇದರಿಂದಾಗಿ ಮುಂದಿನ 48 ಗಂಟೆಗಳಲ್ಲಿ ಕರಾವಳಿ ಆಂಧ್ರ ಸೇರಿದಂತೆ ಕರ್ನಾಟಕದ ಹಲವೆಡೆ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಪದೇ ಪದೇ ವಾಯುಭಾರ ಕುಸಿತವಾಗುತ್ತಿರುವ ಹಿನ್ನಲೆ ರಾಜ್ಯದ ಕರಾವಳಿ ಬಂದರುಗಳಲ್ಲಿ ಅಪಾಯದ ಎಚ್ಚರಿಕೆ ಸಂಖ್ಯೆ 3 ನೀಡಲಾಗಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದೆ.
ಆಂಧ್ರದ ಶ್ರೀಕಾಕುಳಂ, ವಿಜಯನಗರಂ, ಅಲ್ಲೂರಿ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸೂಚನೆಗಳಿವೆ. ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಏಲೂರು, ಕೃಷ್ಣಾ ಎನ್ಟಿಆರ್, ಗುಂಟೂರು, ಬಾಪಟ್ಯಾ ಪ್ರಕಾಶಂ, ನೆಲ್ಲೂರು, ಅನ್ನಮಯ್ಯ ಮತ್ತು ಚಿತ್ತೂರು ತಿರುಪತಿ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಕರ್ನಾಟಕದ ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಮಂಡ್ಯ ಕೊಡಗು, ಶಿವಮೊಗ್ಗ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಕೋಲಾರದಲ್ಲಿ ಸಾಧಾರಣ ಮಳೆಯಾಗುವ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪ್ರಸ್ತುತ ರಾಜ್ಯದಲ್ಲಿ ಚಳಿಗಾಲ ಶುರುವಾಗಿದೆ. ದಟ್ಟ ಮಂಜಿನೊಂದಿಗೆ ಮುಂಜಾನೆ ಆರಂಭವಾಗುತ್ತಿದೆ. ಬೆಳಗ್ಗೆ ಹಾಗೂ ಸಂಜೆ ಮೈ ಕೊರೆಯುವ ಚಳಿ ಇದ್ದು ಮಧ್ಯಾಹ್ನ ನೆತ್ತಿ ಸುಡುವ ಬಿಸಿಲನ್ನು ಗಾಳಿ ತಂಪು ಮಾಡುತ್ತಿದೆ. ಡಿಸೆಂಬರ್ ಆರಂಭದವರೆಗೂ ರಾಜ್ಯದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ಚಳಿ ಹೆಚ್ಚಾಗುತ್ತಿರುವ ಸಮಯದಲ್ಲಿ ಮಳೆ ಮುನ್ಸೂಚನೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.