ರಾಜಕೀಯ

ರಾಜ್ಯಸಭೆಯಲ್ಲಿ ಬಹುಮತ ಪಡೆಯುವಲ್ಲಿ ಬಿಜೆಪಿ ನೇತೃತ್ವದ NDA ವಿಫಲ..ಮುಂದೇನು.‌?

Views: 82

240 ಸದಸ್ಯ ಬಲದ ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಒಕ್ಕೂಟವು ಬಹುಮತದ 121 ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದು, ಬಹುಮತಕ್ಕೆ ಎನ್‌ಡಿಎಗೆ ಇನ್ನೂ ನಾಲ್ಕು ಸ್ಥಾನಗಳ ಅಗತ್ಯವಿದೆ.

ಮಂಗಳವಾರ ಬಿಜೆಪಿ 10 ರಾಜ್ಯಸಭಾ ಸ್ಥಾನಗಳನ್ನು ಗೆದ್ದುಕೊಂಡಿದೆ ಮತ್ತು ಮೊದಲು 20 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿತ್ತು. 30 ಸ್ಥಾನಗಳ ಗೆಲುವಿನೊಂದಿಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಸದರ ಸಂಖ್ಯೆ 97ಕ್ಕೆ ಮತ್ತು ಎನ್‌ಡಿಎ ಬಲ 117ಕ್ಕೆ ಏರಿಕೆಯಾಗಿದೆ.

ಐವರು ನಾಮನಿರ್ದೇಶಿತ ಸಂಸದರು ಸೇರಿದಂತೆ 97 ಸದಸ್ಯರೊಂದಿಗೆ ಬಿಜೆಪಿ ರಾಜ್ಯಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಉಳಿದಿದೆ, ಕಾಂಗ್ರೆಸ್ 29 ಸದಸ್ಯರನ್ನು ಹೊಂದಿದೆ. ಮೂರು ರಾಜ್ಯಗಳಲ್ಲಿ 15 ಸ್ಥಾನಗಳಿಗೆ ನಡೆದ ರಾಜ್ಯಸಭಾ ಚುನಾವಣೆಯು ಅಡ್ಡ ಮತದಾನ ಕೂಡ ನಡೆದಿದೆ. ಬಿಜೆಪಿ 10 ಸ್ಥಾನಗಳನ್ನು, ಕಾಂಗ್ರೆಸ್ ಮೂರು ಮತ್ತು ಸಮಾಜವಾದಿ ಪಕ್ಷವು ಎರಡು ಸ್ಥಾನಗಳನ್ನು ಗೆದ್ದಿದೆ. ಉತ್ತರಪ್ರದೇಶದಲ್ಲಿ ಮತ್ತು ಹಿಮಾಚಲ ಪ್ರದೇಶದಲ್ಲಿ ಹೆಚ್ಚುವರಿ ಗೆಲುವು ಬಿಜೆಪಿಗೆ ಪ್ರಮುಖ ಲಾಭದಾಯಕವಾಗಿದೆ.

ಹಿಮಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನ ಆರು ಶಾಸಕರು ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಸೋತಿದ್ದರು. ಬಿಜೆಪಿಯ ಹರ್ಷವರ್ಧನ್ ಜಯಗಳಿಸಿದ್ದರು. ಈ ಫಲಿತಾಂಶವು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಿದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತವನ್ನು ಕಳೆದುಕೊಂಡಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಎಂಟು ಸ್ಥಾನಗಳನ್ನು ಗೆದ್ದುಕೊಂಡಿದೆ ಮತ್ತು ಮೂರು ಅಭ್ಯರ್ಥಿಗಳನ್ನು ಹಾಕಿದ್ದ ಸಮಾಜವಾದಿ ಪಕ್ಷವು ಕೇವಲ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಮಾಜಿ ಕೇಂದ್ರ ಸಚಿವ ಆರ್‌ಪಿಎನ್‌ ಸಿಂಗ್‌, ಮಾಜಿ ಸಂಸದ ಚೌಧರಿ ತೇಜ್‌ವೀರ್‌ ಸಿಂಗ್‌, ಅಮರ್‌ಪಾಲ್‌ ಮೌರ್ಯ, ಸಂಗೀತಾ ಬಲ್ವಂತ್‌, ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಶಾಸಕ ಸಾಧನಾ ಸಿಂಗ್‌, ನವೀನ್‌ ಜೈನ್‌ ಮತ್ತು ಸಂಜಯ್‌ ಸೇಠ್‌ ಗೆದ್ದ 8 ಬಿಜೆಪಿ ಅಭ್ಯರ್ಥಿಗಳು. ಸಮಾಜವಾದಿ ಪಕ್ಷದ ಜಯಾ ಬಚ್ಚನ್ ಮತ್ತು ರಾಮ್‌ಜಿ ಲಾಲ್ ಸುಮನ್ ಕೂಡ ಗೆದ್ದಿದ್ದಾರೆ. ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದ ಮೂರನೇ ಅಭ್ಯರ್ಥಿ ಅಲೋಕ್ ರಂಜನ್ ಸೋಲು ಅನುಭವಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಮೂರು ಸ್ಥಾನಗಳನ್ನು ಮತ್ತು ಬಿಜೆಪಿ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರು ಚುನಾವಣೆಯಲ್ಲಿ ಸೋತಿದ್ದಾರೆ. ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ಪರವಾಗಿ ಮತ ಚಲಾಯಿಸಿದ್ದರು. ಹಿಮಾಚಲ ಪ್ರದೇಶದಲ್ಲಿ, ರಾಜ್ಯದಿಂದ ಏಕೈಕ ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಕ್ಷದ ಆರು ಶಾಸಕರು ಸೇರಿದಂತೆ ಒಂಬತ್ತು ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿತ್ತು.

ಬಹುಮತಕ್ಕೆ ಕೇವಲ 4 ಸದಸ್ಯರ ಬೆಂಬಲದ ಕೊರತೆ ಇದೆ. 6 ಸ್ಥಾನಗಳಿಗೆ ಏಪ್ರಿಲ್‌ನಲ್ಲಿ ನೇಮಕ ನಡೆಯಲಿದ್ದು, ಈ ನೇಮಕದ ಬಳಿಕ ಹಾಗೂ ಹೊಸದಾಗಿ ಆಯ್ಕೆಯಾದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದಾಗ ಎನ್‌ಡಿಎ ಬಹುಮತ ಪಡೆಯುವ ಸಾಧ್ಯತೆಯಿದೆ.

ಈಗ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಬಲಾಬಲ 29ಕ್ಕೆ ಕುಸಿದಿದ್ದು ಇತ್ತೀಚಿನ ದಶಕಗಳಲ್ಲಿ ಇದು ಅತಿ ಕನಿಷ್ಠವಾಗಿದೆ. ಟಿಎಂಸಿ 13, ಡಿಎಂಕೆ, ಆಪ್‌ ತಲಾ 10, ಬಿಜೆಡಿ, ವೈಎಸ್‌ಆರ್‌ಸಿಪಿ ತಲಾ 9, ಬಿಆರ್‌ಎಸ್‌ 7, ಆರ್‌ಜೆಡಿ 6, ಸಿಪಿಎಂ 5, ಎಐಎಡಿಎಂಕೆ ಮತ್ತು ಜೆಡಿಯು ತಲಾ 4, ಎಸ್‌ಪಿ, ಸಿಪಿಐ ತಲಾ 2, ಸಣ್ಣ ಪಕ್ಷಗಳು 24, ಪಕ್ಷೇತರರು 3 ಮತ್ತು ನಾಮನಿರ್ದೇಶನದ 6 ಸದಸ್ಯರು ಇದ್ದಾರೆ.

ರಾಜ್ಯಸಭೆಯ ಒಟ್ಟು ಬಲಾಬಲ 245 ಆಗಿದ್ದು ಜಮ್ಮು ಮತ್ತು ಕಾಶ್ಮೀರದ ನಾಲ್ಕು, ನಾಮ ನಿರ್ದೇಶನ ಕೋಟಾದ ಒಂದು ಸ್ಥಾನ ಖಾಲಿ ಇದೆ. ಹಾಗಾಗಿ ಸದ್ಯ ರಾಜ್ಯಸಭೆಯಲ್ಲಿ ಬಹುಮತಕ್ಕೆ 121 ಬಲ ಸಾಕಿದೆ.

 

Related Articles

Back to top button