ಮುದ್ರಾಡಿಯಲ್ಲಿ ದೇವರ ಹುಂಡಿಯಿಂದ ಮತ್ತೊಮ್ಮೆ ಕದಿಯಲು ಬಂದ ಕಳ್ಳ ಕೊನೆಗೂ ಸಿಕ್ಕಿ ಬಿದ್ದ!

Views: 182
ಕನ್ನಡ ಕರಾವಳಿ ಸುದ್ದಿ:ಮುದ್ರಾಡಿಯ ದೈವಸ್ಥಾನದ ದೇವರ ಹುಂಡಿಯಿಂದ ಮತ್ತೊಮ್ಮೆ ಕದಿಯಲು ಬಂದ ಕಳ್ಳ ಕೊನೆಗೂ ಸಿಕ್ಕಿ ಬಿದ್ದ ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಈ ಹಿಂದೆ ಹುಂಡಿಯಿಂದ ಕಳವಾದ ಬಗ್ಗೆ ಕ್ಷೇತ್ರದ ಧರ್ಮದರ್ಶಿ ಸುಕುಮಾರ್ ಮೋಹನ್ ಅವರು ಮೇ 30ರಂದು ನಡೆದ ನೇಮದಲ್ಲಿ ಕಲ್ಕುಡ ಮತ್ತು ಕೊರಗಜ್ಜ ದೈವಕ್ಕೆ ದೂರು ನೀಡಿದ್ದರು. 9 ದಿನದೊಳಗೆ ಅತನನ್ನು ಹುಡುಕಿ ಕೊಡುತ್ತೇನೆ ಎಂದು ದೈವ ಅಭಯ ನುಡಿದಿತ್ತು.
ಮುದ್ರಾಡಿ ಗ್ರಾಮದ ನಾಟ್ಯದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ದೇವರ ಹುಂಡಿ ಹಾಗೂ ಕಲ್ಕುಡ ಕಾಣಿಕೆ ಡಬ್ಬಿಯಿಂದ ಮೇ 25ರಂದು ರಾತ್ರಿ ಕಳವಾಗಿತ್ತು.
ಜೂ. 2ರ ಮಧ್ಯರಾತ್ರಿ ಆತ ಮತ್ತೊಮ್ಮೆ ಬಂದಿದ್ದು, ಕದಿಯಲು ಪ್ರಯತ್ನಿಸುತ್ತಿರುವಾಗ ರಾತ್ರಿ ಕಾರೊಂದರಲ್ಲಿ ಹೋಗುತ್ತಿದ್ದವರು ಕಂಡು ಕೂಡಲೇ ಕಾರನ್ನು ನಿಲ್ಲಿಸಿ ಹಿಂದಕ್ಕೆ ಬಂದಾಗ ಆತ ಗೋಡೆ ಹಾರಿ ಬೈಕಿನಲ್ಲಿ ಪರಾರಿಯಾಗಿದ್ದ. ಕಾರಿನವರು ಸಮೀಪದ ಮನೆಯವರಿಗೆ ವಿಷಯ ತಿಳಿಸಿ ಅವರ ಜತೆಗೂಡಿ ಕಳ್ಳನನ್ನು ಬೆನ್ನಟ್ಟಿದರು.ಕೂಡಲೆ ಸೋಮೇಶ್ವರ ಮತ್ತು ಆಗುಂಬೆ ಚೆಕ್‌ಪೋಸ್ಟ್ ಗೆ ಮಾಹಿತಿ ನೀಡಿದರು. ಕಳ್ಳ ಆಗುಂಬೆ ತಲುಪಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದನು.ವಿಚಾರಿಸಿದಾಗ ದಾವಣಗೆರೆ ಹರಿಹರದ ಸಲ್ಮಾನ್ ಎಂದು ಹೇಳಿ ಕೊಂಡಿದ್ದಾನೆ. ಹೆಬ್ರಿ ಪೊಲೀಸರು ಕಳ್ಳನನ್ನು ಬಂಧಿಸಿ,ಪ್ರಕರಣ ದಾಖಲಿಸಿಕೊಂಡಿದ್ದಾರೆ.