ಮಂಗಳೂರು: ಫುಟ್ಬಾಲ್ ಪಂದ್ಯಾಟ ವಿಚಾರದಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ, ಅರೆಬೆತ್ತಲೆಗೊಳಿಸಿ ಹಲ್ಲೆ

Views: 73
ಮಂಗಳೂರು: ಫುಟ್ಬಾಲ್ ಪಂದ್ಯಾಟ ವಿಚಾರದಲ್ಲಿ ಮಂಗಳೂರಿನ ಎರಡು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಗಲಾಟೆ ತಾರಕಕ್ಕೇರಿ, ಒಂದು ಕಾಲೇಜಿನ ವಿದ್ಯಾರ್ಥಿಗಳು ಇನ್ನೊಂದು ಕಾಲೇಜಿನ ವಿದ್ಯಾರ್ಥಿಗಳನ್ನು ಅಪಹರಿಸಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆ ನಡೆಸಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, “ನಗರದಲ್ಲಿ ಎರಡು ಕಾಲೇಜುಗಳು ವಿದ್ಯಾರ್ಥಿಗಳ ನಡುವೆ ಗಲಾಟೆ ಹಾಗೂ ಅಪಹರಣ ಮಾಡಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಆ.14ರಂದು ನೆಹರು ಮೈದಾನದಲ್ಲಿ ಯೆನೆಪೋಯ ವಿದ್ಯಾರ್ಥಿಗಳ ತಂಡ ಮತ್ತು ಅಲೋಶಿಯಸ್ ವಿದ್ಯಾರ್ಥಿಗಳ ತಂಡದ ನಡುವೆ ಫುಟ್ಬಾಲ್ ಪಂದ್ಯ ನಡೆದಿತ್ತು. ಪಂದ್ಯದಲ್ಲಿ ಯೆನೆಪೋಯ ತಂಡ ಜಯ ಗಳಿಸಿತ್ತು. ಅಂದೇ ಮೈದಾನದಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಪಂದ್ಯದ ವೇಳೆ ನಡೆದ ವಿವಾದ ವಿದ್ಯಾರ್ಥಿಗಳನ್ನು ಅಪಹರಿಸಿ ಹಲ್ಲೆ ನಡೆಸುವವರೆಗಿನ ಅಪರಾಧಕ್ಕೆ ಕಾರಣವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ” ಎಂದು ತಿಳಿಸಿದರು.
ಆ.19ರಂದು ಸುಮಾರು ಸಂಜೆ 6.15ಕ್ಕೆ, ಪಾಂಡೇಶ್ವರ ಫೋರಂ ಮಾಲ್ ಬಳಿ ಯೆನೆಪೋಯ ಕಾಲೇಜಿನ ದೂರುದಾರ 17 ವರ್ಷದ ವಿದ್ಯಾರ್ಥಿ ಸೇರಿ ನಾಲ್ವರನ್ನು 18-19 ವರ್ಷದ ಯುವಕರ ಗುಂಪೊಂದು ಕರೆದುಕೊಂಡು ಹೋಗಿದೆ. ಇವರನ್ನು ದಿಯಾನ್, ತಸ್ಲಿಮ್, ಸಲ್ಮಾನ್ ಹಾಗೂ ಇನ್ನಿಬ್ಬರು 17 ವರ್ಷದ ಅಪ್ರಾಪ್ತರು ಎಂದು ಗುರುತಿಸಲಾಗಿದೆ. ಆರೋಪಿಗಳು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಕರೆದೊಯ್ದು ಕೈ ಮತ್ತು ಕಾಲಿನಿಂದ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ” ಎಂದರು.
ನಂತರ ಅಲ್ಲಿ ಅವರ ಮೇಲೆ ಮತ್ತಷ್ಟು ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಸಂತ್ರಸ್ತರ ಮೇಲೆ ಹಲ್ಲೆ ನಡೆಸುವಾಗ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.
ಗಾಯಗೊಂಡವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೂರಿನ ಮೇರೆಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.