ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರದ ಆರೋಪಿ ಲೋಕೇಶ್ವರ ಸ್ವಾಮೀಜಿ ಮಠ ನೆಲಸಮ

Views: 183
ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿದ್ದ ಬೆಳಗಾವಿಯ ರಾಮಮಂದಿರ ಮಠದ ಲೋಕೇಶ್ವರ ಸ್ವಾಮೀಜಿ ಇದೀಗ ಜೈಲಿನಲ್ಲಿದ್ದಾನೆ. ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಆರೋಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಗುರುವಾರ ಬೆಳಿಗ್ಗೆ ಮೇಖಳಿ ಗ್ರಾಮದಲ್ಲಿರುವ ಲೊಕೇಶ್ವರ ಸ್ವಾಮೀಯ ಮಠವನ್ನು ಸಂಪೂರ್ಣ ಧ್ವಂಸ ಮಾಡಲಾಗಿದೆ. ತಾಲೂಕು ಆಡಳಿತ ಮೂರು ಜೆಸಿಬಿ ಬಳಸಿ ಬೆಳ್ಳಂಬೆಳಗ್ಗೆ ಮೇಖಳಿ ಗ್ರಾಮದಲ್ಲಿನ ರಾಮ ಮಂದಿರ ಮಠವನ್ನು ಸಂಪೂರ್ಣವಾಗಿ ನೆಲಸಮ ಮಾಡಿದೆ.
ಲೋಕೇಶ್ವರ ಸ್ವಾಮೀಜಿ ತನ್ನ ಜೊತೆಯೇ ಅಪ್ರಾಪ್ತೆಯನ್ನು ರಾಯಚೂರು, ಬಾಗಲಕೋಟೆಯ ಲಾಡ್ಜ್‌ಗಳಿಗೆ ಕರೆದೊಯ್ದು 2 ದಿನಗಳ ಕಾಲ ಆಕೆ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನುವ ಆರೋಪ ಕೇಳಿಬಂದಿದ್ದು ಇದೀಗ ಆತ ಪೊಲೀಸರ ವಶದಲ್ಲಿದ್ದಾನೆ. ಲೊಕೇಶ್ವರ ಸ್ವಾಮೀಜಿಯ ಮಠವನ್ನು ತಾಲೂಕು ಆಡಳಿತ ಸಂಪೂರ್ಣವಾಗಿ ಧ್ವಂಸ ಮಾಡಿದೆ. ರಾಯಬಾಗ ತಹಶಿಲ್ದಾರರ ನೇತೃತ್ವದಲ್ಲಿ ಮಠ ನೆಲಸಮ ಮಾಡಲಾಗಿದೆ. ಮೇಖಳಿ ಗ್ರಾಮದ ಸರ್ವೇ ನಂ. 225 ರಲ್ಲಿ ಸರ್ಕಾರಿ ಗೈರಾಣ ಜಮೀನಿನಲ್ಲಿ ಲೊಕೇಶ್ವರ ಸ್ವಾಮಿ ಮಠ ಸ್ಥಾಪನೆ ಮಾಡಿದ್ದರು. 8 ವರ್ಷಗಳ ಹಿಂದೆ 8 ಎಕರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಮಠ ನಿರ್ಮಾಣ ಮಾಡಲಾಗಿತ್ತು. ಇದೀಗ ಸ್ವಾಮಿ ಜೈಲು ಪಾಲಾಗಿದ್ದಾರೆ.
ಏನಿದು ಪ್ರಕರಣ?
ವಿದ್ಯಾರ್ಥಿನಿಯನ್ನು ಮನೆಗೆ ಬಿಡುವುದಾಗಿ ಹೇಳಿ ಬೇರೆ ಜಿಲ್ಲೆಗಳಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಮೇಕಳಿ ಗ್ರಾಮದ ಸ್ವಯಂ ಘೋಷಿತ ಮಠಾಧೀಶನಾದ ಹಠಯೋಗಿ ಲೋಕೇಶ್ವರ ಎಂಬ ಸ್ವಾಮೀಜಿಯನ್ನು ಬಂಧಿಸಲಾಗಿತ್ತು. ಆರೋಪಿ ಮೂಲತಃ ಕಲಬುರ್ಗಿ ಜಿಲ್ಲೆಯವನಾಗಿದ್ದು, ಹಲವು ವರ್ಷಗಳಿಂದ ಬೆಳಗಾವಿಯಲ್ಲಿ ನೆಲೆಸಿದ್ದ. ವಿದ್ಯಾರ್ಥಿನಿಯನ್ನು ಬಾಗಲಕೋಟೆ, ರಾಯಚೂರು ಜಿಲ್ಲೆಗಳ ಲಾಡ್ಜ್ ಕರೆದುಕೊಂಡು ಹೋಗಿ ಆಕೆಯ ಮೇಲೆ ಅತ್ಯಾಚಾರ ಎಸೆಗಿದ್ದಾನೆಂದು ಸಂತ್ರಸ್ತೆಯ ಪೋಷಕರು ದೂರು ನೀಡಿದ್ದಾರೆ. ಈ ಆಧಾರದ ಅಡಿ ಸ್ವಯಂಘೋಷಿತ ಸ್ವಾಮೀಜಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದರು. ಕಳೆದ ವಾರವೇ ಮೂಡಲಗಿ ಠಾಣೆಯಲ್ಲಿ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿತ್ತು. ಕೇಸ್ ದಾಖಲಾಗುತ್ತಿದ್ದಂತೆ ಸ್ವಾಮೀಜಿಯ ಬಂಧನವಾಗಿದೆ.