ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿಗೆ ರಾಜೀನಾಮೆ

Views: 28
ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಿ.ಎನ್.ಬಚ್ಚೇಗೌಡ ರಾಜೀನಾಮೆ ಸಲ್ಲಿಸಿದ್ದು, ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಗೆ ರಾಜೀನಾಮೆ ಪತ್ರ ತಲುಪಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಸಂಸದ ಬಿ.ಎನ್.ಬಚ್ಚೇಗೌಡ, ಸ್ವ ಇಚ್ಛೆಯಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಅಂಗೀಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 2008ರಲ್ಲಿ ಬಿಜೆಪಿ ಸೇರ್ಪಡೆ ಬಳಿಕ ಶಾಸಕ, ಸಚಿವ, ಸಂಸದರಾಗಿ ಸಾರ್ವಜನಿಕ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಚ್ಚೇಗೌಡರ ಗೆಲುವಿನ ಮೂಲಕವೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಹೊಸಕೋಟೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಬಾರಿ ಗೆಲುವು ಕಂಡಿದ್ದ ಬಚ್ಚೇಗೌಡ ಅವರು ಜಗದೀಶ್ ಶೆಟ್ಟರ್ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು.