ರಾಜಕೀಯ

ಬಿಜೆಪಿ ಕರ್ನಾಟಕದಲ್ಲಿ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರು ಫೈನಲ್ ಮಾಡಿಲ್ಲ ಯಾಕೆ..? 

Views: 42

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ, 2024ರ ಲೋಕಸಭೆ ಚುನಾವಣೆ ಹತ್ತಿರ ಬಂದ ಕಾರಣಕ್ಕೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೀಗಿದ್ದರೂ ಕರ್ನಾಟಕದ ಯಾವ ಅಭ್ಯರ್ಥಿಗೂ ಈಗ ಬಿಜೆಪಿ ಟಿಕೆಟ್ ನೀಡಿಲ್ಲ.

ಬಿಜೆಪಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಟಾರ್ಗೆಟ್ ಮಾಡಿದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆಯಲು ಸಕಲ ಸಿದ್ಧತೆ ನಡೆಸಿದೆ. ಹೀಗಿದ್ದಾಗಲೇ ದಕ್ಷಿಣ ಭಾರತದ ಪ್ರಮುಖ ರಾಜ್ಯವಾದ ಕರ್ನಾಟಕದಲ್ಲಿ ಬಿಜೆಪಿ ಮೈತ್ರಿಯ ಮೊರೆ ಹೋಗಿದೆ. ಈ ಎಲ್ಲಾ ಲೆಕ್ಕಾಚಾರದ ಕಾರಣಕ್ಕೆ, ಜೆಡಿಎಸ್ ಜೊತೆಗೆ ಮೈತ್ರಿ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಹೀಗಿದ್ದರೂ ಬಿಜೆಪಿಯ ಕೇಂದ್ರದ ನಾಯಕರು ಈವರೆಗು ಕರ್ನಾಟಕದಿಂದ ಲೋಕಸಭೆಗೆ ಅಭ್ಯರ್ಥಿಗಳ ಪ್ರಕಟಿಸಿಲ್ಲ. ಹಾಗಾದರೆ ಇದಕ್ಕೆ ಅಸಲಿ ಕಾರಣ ಏನು?

ಇದೀಗ ಬಿಜೆಪಿ ಮೊದಲನೆ ಪಟ್ಟಿಯಲ್ಲಿ 195 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಕರ್ನಾಟಕದಲ್ಲಿನ ಲೋಕಸಭೆ ಕ್ಷೇತ್ರಗಳಿಗೆ ಯಾವುದೇ ಅಭ್ಯರ್ಥಿಯನ್ನೂ ಫೈನಲ್ ಮಾಡಿಲ್ಲ  ಇದಕ್ಕೆ ಕೆಲವು ಪ್ರಮುಖ ಕಾರಣಗಳನ್ನು ನೀಡಲಾಗುತ್ತಿದ್ದು, ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ.

ಹೀಗೆ ಕರ್ನಾಟಕದಲ್ಲಿ ಬಿಜೆಪಿ ತನ್ನ ಮೊದಲ ಪಟ್ಟಿಯಲ್ಲಿ ಯಾವುದೇ ಅಭ್ಯರ್ಥಿ ಹೆಸರನ್ನು ಫೈನಲ್ ಮಾಡದೇ ಇರಲು ಕಾರಣ ಜೆಡಿಎಸ್ ಜೊತೆಗಿನ ಮೈತ್ರಿ ಲೆಕ್ಕಾಚಾರ ಎನ್ನಲಾಗಿದೆ. ಯಾಕಂದ್ರೆ ಬಿಜೆಪಿ & ಜೆಡಿಎಸ್ ದೋಸ್ತಿ ಮಾಡಿಕೊಂಡು ಲೋಕಸಭೆಯಲ್ಲಿ ಚುನಾವಣೆಯ ಅಖಾಡಕ್ಕೆ ಇಳಿಯುತ್ತಿವೆ. ಹೀಗಿದ್ದಾಗ ಯಾರಿಗೆ ಎಷ್ಟು ಸ್ಥಾನ ಹಂಚಿಕೆ ಆಗಬೇಕು? ಮಂಡ್ಯದಲ್ಲಿ ಯಾರಿಗೆ ಕೊಡಬೇಕು. ಕಾರಾವರದ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಯಾರು? ಒಂದೆಡೆ ಉಡುಪಿಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎನ್ನುವ ಕೂಗು,  ದೋಸ್ತಿ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ ಎಷ್ಟು ಸ್ಥಾನ ಸಿಗುತ್ತದೆ? ಎಂಬ ಬಗ್ಗೆ, ಇನ್ನೂ ಲೆಕ್ಕಾಚಾರ ಫೈನಲ್ ಆಗಿಲ್ಲ. ಹೀಗಾಗಿ ಬಿಜೆಪಿ ಇನ್ನೂ ಕರ್ನಾಟಕದಲ್ಲಿ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರು ಫೈನಲ್ ಮಾಡಿಲ್ಲ ಎನ್ನಲಾಗುತ್ತಿದೆ.

ಇನ್ನೊಂದು ಕಡೆ, ಬಿಜೆಪಿ ಒಳಗೆ ಇದೀಗ ಕಾಡುತ್ತಿರುವ ಆಂತರಿಕ ಕಿತ್ತಾಟವೇ ಪಟ್ಟಿಯನ್ನು ಘೋಷಣೆ ಮಾಡದೇ ಇರುವುದಕ್ಕೆ ಪ್ರಮುಖ ಕಾರಣ ಎಂಬ ಮಾತು ಕೂಡ ಕೇಳಿಬರುತ್ತಿದೆ. ಯಾಕಂದ್ರೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಇದೇ ರೀತಿ ಘಟನೆ ನಡೆದಿತ್ತು. ಆಂತರಿಕ ತಿಕ್ಕಾಟ ಕಾರಣ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿತ್ತು ಎಂಬ ಆರೋಪ ಇತ್ತು. ಹೀಗಾಗಿ ಇದೀಗ ಕರ್ನಾಟಕದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನಂತರ, ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಿಸಬಹುದು ಎನ್ನಲಾಗುತ್ತಿದೆ.

 

Related Articles

Back to top button