ಪುತ್ರನಿಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಸಿಡಿದೆದ್ದ ಈಶ್ವರಪ್ಪ, ಯಡಿಯೂರಪ್ಪ ವಿರುದ್ದ ವಾಗ್ದಾಳಿ, ಬಂಡಾಯದ ಸುಳಿವು.,?

Views: 90
ಲೋಕಸಭೆ ಚುನಾವಣೆಗೆ ಪುತ್ರ ಕಾಂತೇಶ್‌ಗೆ ಟಿಕೆಟ್ ಕೈ ತಪ್ಪುತ್ತಿದ್ದಂತೆ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಸಿಡಿದೆದ್ದಿದ್ದಾರೆ. “ನನ್ನ ಮಗನಿಗೆ ಟಿಕೆಟ್ ತಪ್ಪಿಸಿದ್ದು ಯಡಿಯೂರಪ್ಪ” ಎಂದು ನೇರವಾಗಿ ಹೇಳಿದ್ದಾರೆ.
ಬುಧವಾರ ಸಂಜೆ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗದ ಬೆನ್ನಲ್ಲೇ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿಗೆ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದಾರೆ. ಆದರೆ, ನನ್ನ ಮಗ ಕಾಂತೇಶ್‌ಗೆ ಅನ್ಯಾಯ ಮಾಡಿದ್ರು” ಎಂದಿದ್ದಾರೆ.
“ರಾಜ್ಯದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಲುಕಿದೆ. ಕುಟುಂಬದ ಕೈಯಿಂದ ಪಕ್ಷ ರಕ್ಷಿಸಬೇಕಿದೆ. ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಬಿಟ್ಟು ಬೇರೆ ಲಿಂಗಾಯತ ನಾಯಕರು ರಾಜ್ಯದಲ್ಲಿ ಇಲ್ವಾ? ಪಕ್ಷದ ಚುನಾವಣಾ ಸಮಿತಿಯ ಸಭೆಯಲ್ಲಿ ಹಾವೇರಿ ಟಿಕೆಟ್ ಕಾಂತೇಶ್‌ಗೆ ಕೊಡಿ ಎಂದು ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದರು. ಆದರೂ, ಯಡಿಯೂರಪ್ಪ ಹಠ ಹಿಡಿದು ಅವರಿಗೇ ಯಾಕೆ ಟಿಕೆಟ್ ಕೊಡಿಸಿದ್ದು ಯಾಕೆ?” ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ
“ನಾನು 40 ವರ್ಷಗಳಿಂದ ಈ ಪಕ್ಷಕ್ಕೆ ಕೆಲಸ ಮಾಡಿದ್ದೇನೆ. ನನಗೆ ಮಾತ್ರವಲ್ಲದೆ, ಪ್ರತಾಪ್ ಸಿಂಹ, ಸಿ.ಟಿ ರವಿ, ನಳಿನ್ ಕುಮಾರ್ ಕಟೀಲ್, ಸದಾನಂದಗೌಡರಂತಹ ಪಕ್ಷದ ನಾಯಕರಿಗೆ ಅನ್ಯಾಯವಾಗಿದೆ. ಬಿಎಸ್‌ವೈ ಪಕ್ಷದ ಕತ್ತು ಹಿಸುಕಿದ್ದಾರೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ
ಈ ಬಾರಿ 9 ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದೆ. ಈ ಪೈಕಿ ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್, ಸದಾನಂದಗೌಡ ಸೇರಿದಂತೆ ಪ್ರಮುಖರು ಇದ್ದಾರೆ. ಇನ್ನು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಸಿ.ಟಿ ರವಿ ಮತ್ತು ಹಾವೇರಿ-ಗದಗ ಕ್ಷೇತ್ರದ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಈಶ್ವರಪ್ಪ ಅವರಿಗೆ ನಿರಾಸೆಯಾಗಿದೆ ಎಂದರು.