ತಂಗಿ ಮನೆಯಲ್ಲೇ ಕಳ್ಳತನ ಮಾಡಿದ ಅಕ್ಕ ಪೊಲೀಸರ ಬಲೆಗೆ

Views: 141
ಬೆಂಗಳೂರು: ತಂಗಿ ಮನೆಯಲ್ಲೇ ಕಳ್ಳತನ ಮಾಡಿದ ಅಕ್ಕ ಪೊಲೀಸರ ಬಲೆಗೆ ಬಿದ್ದ ಘಟನೆ ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿ ಭಾಗದ ಶಶಿಕಲಾ (30) ಬಂಧಿತ ಆರೋಪಿ.
ಆರೋಪಿಯಿಂದ ಒಟ್ಟು 5,50,000 ಮೌಲ್ಯದ 70 ಗ್ರಾಂ ಚಿನ್ನ ಮತ್ತು 350 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಗಂಡನಿಗೆ ಹುಷಾರಿಲ್ಲ ಎಂದು ಗಂಡನೊಂದಿಗೆ ಅಕ್ಕನ ಮನೆಗೆ ತಂಗಿ ಹೋಗಿದ್ದಾಗ ಈ ಘಟನೆ ನಡೆದಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದ ಅಕ್ಕನ ಮನೆಗೆ ಹೋಗಿದ್ದ ತಂಗಿ ಮತ್ತು ಆಕೆಯ ಪತಿ ಔಷಧ ತರಲು ಅಕ್ಕನಿಗೆ ಸ್ಕೂಟರ್ ಕೀ ಕೊಟ್ಟಿದ್ದರು. ಸ್ಕೂಟರ್ ಕೀ ಯೊಂದಿಗೆ ತಂಗಿಯ ಮನೆ ಕೀ ಕೂಡ ಇತ್ತು. ಇದನ್ನು ಗಮನಿಸಿದ ಅಕ್ಕ ನೇರವಾಗಿ ತಂಗಿಯ ಮನೆಗೆ ಹೋಗಿದ್ದಾಳೆ.
ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದ ತಂಗಿಯ ಮನೆಯ 100 ಮೀಟರ್ ದೂರದಲ್ಲಿ ಸ್ಕೂಟರ್ ನಿಲ್ಲಿಸಿ ನಡೆದುಕೊಂಡು ತಂಗಿ ಮನೆಗೆ ಹೋದ ಅಕ್ಕನಿಗೆ ಬೀರು ಕೀ ಸಿಗದ ಕಾರಣ ಬೀರು ಒಡೆದು ಚಿನ್ನ ಮತ್ತು ಬೆಳ್ಳಿಯನ್ನು ಕಳ್ಳತನ ಮಾಡಿದ್ದಾಳೆ.
ಮನೆಗೆ ಬಂದ ತಂಗಿಗೆ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ತಿಳಿದು ಆಡುಗೋಡಿ ಠಾಣೆಗೆ ದೂರು ನೀಡಿದ್ದರು. ಮನೆ ಕೀ ಒಡೆಯದೆ ಬೀರು ಬೀಗ ಮಾತ್ರ ಒಡೆದಿರುವುದು ಪೊಲೀಸರ ಸಂಶಯಕ್ಕೆ ಕಾರಣವಾಗಿತ್ತು
ಈ ವೇಳೆ ಸಿಸಿಟಿವಿ ಮೂಲಕ ಟ್ರ್ಯಾಕ್ ಮಾಡಿ ಅಕ್ಕನ ವಿಚಾರಸಿದಾಗ ಸತ್ಯ ಬಹಿರಂಗವಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಳವಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.