ಕಾಲೇಜಿನಿಂದ ಮನೆಗೆ ಹೊರಟಿದ್ದ ಯುವತಿಗೆ ವಾಹನ ಡಿಕ್ಕಿಯಾಗಿ ಸಾವು, ಆಕ್ರೋಶಗೊಂಡ ಸಹಪಾಠಿಗಳು ದಿಢೀರ್ ಪ್ರತಿಭಟನೆ

Views: 72
ಬೆಳಗಾವಿ ಜಿಲ್ಲೆಯ ಕಿತ್ತೂರು, ಬೀಡಿ ರಸ್ತೆಯ ಫಾರೆಸ್ಟ್ ನಾಕಾ ಬಳಿ ಬುಧವಾರ, ಕಾಲೇಜು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವಿದ್ಯಾರ್ಥಿನಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಕಿತ್ತೂರಿನ ಸರ್ಕಾರಿ ಪದವಿ ಕಾಲೇಜಿನಲ್ಲಿ 3ನೇ ಸೆಮಿಸ್ಟರ್ ಓದುತ್ತಿದ್ದ ಕಾವೇರಿ ಬಸಪ್ಪ ಕಾಜಗಾರ (20) ಮೃತ ವಿದ್ಯಾರ್ಥಿನಿ.
ದೇವಗಾಂವ್ ಗ್ರಾಮದ ಅನಿಲ್ ಚಿವುಟಗುಂಡಿ ಅಪಘಾತಕ್ಕೆ ಕಾರಣನಾದ ವಾಹನ ಚಾಲಕ.
ಬುಧವಾರ ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿನಿ ಮನೆ ಕಡೆಗೆ ಹೊರಟಿದ್ದರು. ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದಾಗ ಏಕಾಏಕಿ ಬಂದ ವಾಹನ ವಿದ್ಯಾರ್ಥಿನಿ ಮೇಲೆಯೇ ಹರಿಯಿತು. ತೀವ್ರ ಗಾಯಗೊಂಡ ಅವರನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತು. ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಗಿ ವೈದ್ಯರು ಎಂದು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆಕ್ರೋಶಗೊಂಡ ಜನರನ್ನು ಚದುರಿಸಿ, ಆರೋಪಿಯನ್ನು ವಶಕ್ಕೆ ಪಡೆದರು.
ವಿಷಯ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿನಿಯ ಸಹಪಾಠಿಗಳು ಆಸ್ಪತ್ರೆಯತ್ತ ಧಾವಿಸಿದರು. ವಿದ್ಯಾರ್ಥಿನಿ ಸಾವಿಗೆ ಕಣ್ಣೀರು ಹಾಕಿದರು.
ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿ– ವಿದ್ಯಾರ್ಥಿನಿಯರು ದಿಢೀರ್ ಪ್ರತಿಭಟನೆ ಶುರು ಮಾಡಿದರು. ಆರೋಪಿಯು ಮದ್ಯ ಕುಡಿದ ಮತ್ತಿನಲ್ಲಿ ವಾಹನ ಓಡಿಸಿ ಅಪಘಾತ ಮಾಡಿದ್ದಾನೆ. ಆತನಿಗೆ ಉಗ್ರ ಶಿಕ್ಷೆ ಆಗಬೇಕು. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಈ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಣೆ ಕೂಗಿದರು.