ಕಾರ್ಕಳ ಪರಶುರಾಮ ಪ್ರತಿಮೆ ನಿಜವಾದ ಕಂಚಿನದ್ದು ಅಲ್ಲ, ಅದು ನಕಲಿ ಆರೋಪ:ಸಿಐಡಿ ತನಿಖೆಗೆ ಸಿಎಂ ಆದೇಶ

Views: 94
ಥೀಮ್ ಪಾರ್ಕ್ ಕಾಮಗಾರಿ ಕಳಪೆಯಾಗಿದೆ ಮತ್ತು ಅವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ಉನ್ನತ ಮಟ್ಟದ ತನಿಖೆಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ ಹೆಬ್ಬಾಳ್ಕರ್ ಅವರು ಶಿಫಾರಸ್ಸು ಮಾಡಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿರುವ ಸಿಎಂ ಸಿದ್ದರಾಮಯ್ಯ, ತನಿಖೆಯನ್ನು ಸಿಐಡಿಗೆ ನೀಡಿ ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಕಳಪೆಯಾಗಿದೆ ಮತ್ತು ಅವ್ಯವಹಾರದಿಂದ ಕೂಡಿದೆ. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸಾರ್ವಜನಿಕರಿಂದ ಭಾರೀ ದೂರು ಕೇಳಿ ಬಂದಿತ್ತು. ಈ ಕುರಿತು ಸತ್ಯಾಸತ್ಯತೆ ಪರಿಶೀಲಿಸಲು ಖುದ್ದು ಸಚಿವೆ ಲಕ್ಷಿ ಹೆಬ್ಬಾಳ್ಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.
ಜನವರಿ 27, 2023ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರ್ಕಳದ ತಾಲೂಕಿನ ಬೈಲೂರಿನ ಉಮಿಕುಂಜ ಬೆಟ್ಟದ ಮೇಲೆ ನಿರ್ಮಾಣವಾಗಿರುವ ಪರಶುರಾಮ ಥೀಂ ಪಾರ್ಕ್ಅನ್ನು ಉದ್ಘಾಟನೆ ಮಾಡಿದ್ದರು.
ಬೊಮ್ಮಾಯಿ ಸರ್ಕಾರದಲ್ಲಿ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ಸುನಿಲ್ ಕುಮಾರ್ ಅವರ ಬಹಳ ಮಹತ್ವಕಾಂಕ್ಷೆಯ ಯೋಜನೆ ಇದಾಗಿತ್ತು. ಥೀಮ್ ಪಾರ್ಕ್ ಉದ್ಘಾಟನೆಯನ್ನು ಬಹಳ ಅದ್ದೂರಿಯಾಗಿ ನೆರವೇರಿಸಿದ್ದ ಸುನಿಲ್ ಕುಮಾರ್ ಈ ಕುರಿತು ಹೆಮ್ಮೆ ಪಟ್ಟಿದ್ದರು.
ಬಳಿಕ, ಥೀಮ್ ಪಾರ್ಕ್ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಕಾಮಗಾರಿ ಕುರಿತು ತನಿಖೆ ಮಾಡುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿತ್ತು. ಥೀಮ್ ಪಾರ್ಕ್‌ನಲ್ಲಿರುವ ಪರಶುರಾಮ ಪ್ರತಿಮೆ ನಿಜವಾದ ಕಂಚಿನದ್ದು ಅಲ್ಲ, ಅದು ನಕಲಿ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ನಡುವೆ ಅಕ್ಟೋಬರ್ 15, 2023ರಂದು ಥೀಮ್ ಪಾರ್ಕ್‌ನ ಪರಶುರಾಮ ಪ್ರತಿಮೆ ಏಕಾಏಕಿ ನಾಪತ್ತೆಯಾಗಿತ್ತು
ಆ ಸಂದರ್ಭದಲ್ಲಿ ಶಾಸಕ ಸುನಿಲ್ ಕುಮಾರ್ ಸೇರಿದಂತೆ ಬಿಜೆಪಿಗರು, ದುರಸ್ಥಿಗಾಗಿ ಕಂಚಿನ ಪ್ರತಿಮೆಯನ್ನು ತೆರವು ಮಾಡಲಾಗಿದೆ. ಅದು ನಿಜವಾದ ಕಂಚಿನ ಪ್ರತಿಮೆ ಎಂದು ಸಮರ್ಥಿಸಿಕೊಂಡಿದ್ದರು. ಬಳಿಕ ಚರ್ಚೆಗಳು ತಣ್ಣಗಾಗಿತ್ತು. ಇದೀಗ ಸಿಎಂ ಥೀಮ್ ಪಾರ್ಕ್ ಕಾಮಗಾರಿಯ ಕುರಿತು ಸಿಒಡಿ ತನಿಖೆಗೆ ಆದೇಶಿಸಿದ್ದಾರೆ.