ಇನ್ನುಳಿದ 8 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಮಿಸ್?

Views: 100
ಇಲ್ಲಿಯವರೆಗೆ 9 ಮಂದಿ ಸಂಸದರಿಗೆ ಕೊಕ್ ಕೊಡಲಾಗಿದೆ. ಮೈತ್ರಿ ಹಿನ್ನೆಲೆ ಬಾಕಿ ಉಳಿದ 8 ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಲಿದ್ದು ಅಲ್ಲಿರುವ ಸಂಸದರನ್ನು ಬದಲಿಸುವ ಸಾಧ್ಯತೆಗಳಿದೆ.
ಉತ್ತರ ಕನ್ನಡದಲ್ಲಿ ಕಳೆದ ನಾಲ್ಕು ವರ್ಷಗಳ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದ ಸಂಸದ ಅನಂತ ಕುಮಾರ್ ಹೆಗೆಡೆ ಈಗ ವಿವಾದಗಳ ಮೂಲಕ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಸಂವಿಧಾನ ಬದಲಿಸುವ ಅವರ ಹೇಳಿಕೆ ದೇಶದ್ಯಾಂತ ಬಿಜೆಪಿಗೆ ಮುಜುಗರ ಉಂಟು ಮಾಡಿದೆ. ಅಲ್ಲದೇ ಸ್ಥಳೀಯ ಕಾರ್ಯಕರ್ತರಲ್ಲೂ ಹೆಗೆಡೆ ಬಗೆಗೆ ಆಕ್ಷೇಪಗಳಿದೆ ಅದಾಗ್ಯೂ ಟಿಕೆಟ್‌ಗೆ ಪ್ರಬಲ ಪೈಪೊಟಿಯಲ್ಲಿದ್ದಾರೆ. ವಿಶೇಶ್ವರ್ ಹೆಗಡೆ ಕಾಗೇರಿ ಮತ್ತು ರಾಮಮಂದಿರ ಉಸ್ತುವಾರಿ ಹೊತ್ತಿದ್ದ ಗೋಪಾಲ್ ಅವರ ಹೆಸರು ಮುಂಚೂಣಿಯಲ್ಲಿದೆ.
ಕೋಲಾರ, ಹಾಸನ, ಮಂಡ್ಯ ಜೆಡಿಎಸ್ ಪಾಲಾಗಲಿದ್ದು ಬಾಕಿ ಉಳಿದ ಚಿತ್ರದುರ್ಗ, ಬೆಳಗಾವಿ, ಚಿಕ್ಕಬಳ್ಳಾಪುರ, ರಾಯಚೂರು, ಉತ್ತರ ಕನ್ನಡದಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಬಹುದು ಎನ್ನಲಾಗುತ್ತಿದೆ. ಚಿತ್ರದುರ್ಗದಿಂದ ಕೇಂದ್ರ ಸಚಿವ ಹಾಲಿ ಸಂಸದ ಎ.ನಾರಯಣಸ್ವಾಮಿ ಚುನಾವಣೆ ಸ್ಪರ್ಧೆಗೆ ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಸ್ಥಳೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿರುವ ಹಿನ್ನೆಲೆ ಅವರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಸದ್ಯ ಮಾಜಿ ಸಚಿವ ಜನಾರ್ದನ ಸ್ವಾಮಿ ಸೇರಿ ಕೆಲವು ನಾಯಕರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ಬೆಳಗಾವಿಯಲ್ಲಿ ಸದ್ಯ ಮಂಗಳಾ ಅಂಗಡಿ ಸಂಸದೆಯಾಗಿದ್ದಾರೆ. ಪತಿ ಸುರೇಶ್ ಅಂಗಡಿ ನಿಧನ ಹಿನ್ನೆಲೆ ಮಂಗಳಾ ಅಂಗಡಿಗೆ ಟಿಕೆಟ್ ನೀಡಲಾಗಿತ್ತು. ಸದ್ಯ ಅವರು ತಮ್ಮ ಪುತ್ರಿಗೆ ಟಿಕೆಟ್ ಕೇಳಿದ್ದು, ಇದೇ ಕ್ಷೇತ್ರದಲ್ಲಿ ಮಂಗಳಾ ಅಂಗಡಿ ಸಂಬಂಧಿಯೂ ಆಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರು ಹೆಸರು ಕೇಳಿ ಬಂದಿದೆ. ಮಹಾಂತೇಶ್ ಕವಟಿಗಿಮಠ ಕೂಡಾ ಟಿಕೆಟ್ ಆಕಾಂಕ್ಷಿಯಾಗಿದ್ದು, ಈ ಬಾರಿ ಮಂಗಳಾ ಅಂಗಡಿ ಅವರಿಗೆ ಟಿಕೆಟ್ ಸಿಗುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ವಯೋ ಸಹಜ ಅನಾರೋಗ್ಯದ ಕಾರಣಗಳಿಂದ ಚುನಾವಣೆ ರಾಜಕೀಯಕ್ಕೆ ಹಾಲಿ ಸಂಸದ ಬಚ್ಚೆಗೌಡ ನಿವೃತ್ತಿ ಘೋಷಿಸಿದ್ದಾರೆ. ಮಾಜಿ ಸಚಿವ ಡಾ. ಸುಧಾಕರ್ ಸೇರಿ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಗೊತ್ತಿಲ್ಲ. ರಾಯಚೂರಿನಲ್ಲೂ ರಾಜಾ ಅಮರೇಶ ನಾಯಕ್ ಸಂಸದರಾಗಿದ್ದು, ಅಭ್ಯರ್ಥಿಯ ಬದಲಾವಣೆ ಕೂಗು ಕ್ಷೇತ್ರದಲ್ಲಿ ಕೇಳಿ ಬಂದಿದೆ. ಮಾಜಿ ಸಂಸದ ಬಿ.ವಿ ನಾಯಕ್ ಹೆಸರು ಇಲ್ಲಿ ಕೇಳಿ ಬಂದಿದೆ. ಅವರ ಪರ ರಮೇಶ್ ಜಾರಕಿಹೋಳಿ ಪರ ಲಾಬಿ ನಡೆಸುತ್ತಿದ್ದಾರೆ.